ಮಧ್ಯಪ್ರದೇಶ ಬಿಕ್ಕಟ್ಟು: ಬೆಂಗಳೂರಿನಲ್ಲಿ ಕೈ 'ಹೈಡ್ರಾಮಾ'; ದಿಗ್ವಿಜಯ್ ಸಿಂಗ್ ಸೇರಿ ಹಲವು ನಾಯಕರು ಪೊಲೀಸ್ ವಶಕ್ಕೆ

ಮಧ್ಯ ಪ್ರದೇಶ ಸರ್ಕಾರದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದ್ದು, ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದು
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದು

ಬೆಂಗಳೂರು: ಮಧ್ಯ ಪ್ರದೇಶ ಸರ್ಕಾರದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಹೈಡ್ರಾಮಾ ನಡೆದಿದ್ದು, ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 


ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಶಾಸಕರು ಉಳಿದುಕೊಂಡಿರುವ ಯಲಹಂಕ ಬಳಿಯ ರಮಡ ರೆಸಾರ್ಟ್ ಗೆ ತೀವ್ರ ಪೊಲೀಸ್ ಭದ್ರತೆಯಿದೆ. ಶಾಸಕರ ಮನವೊಲಿಸಿ ಕರೆದುಕೊಂಡು ಹೋಗಲು ಬಂದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಇಂದು ಬೆಳಗ್ಗೆ ಪೊಲೀಸ್ ಭದ್ರತೆಯನ್ನು ಭೇದಿಸಿ ಹೊಟೇಲ್ ಒಳಗೆ ಹೋಗಲು ಯತ್ನಿಸಿದ್ದಾರೆ. ಇವರ ಜೊತೆ ಕಾಂಗ್ರೆಸ್ ನ ಹಲವು ಕಾರ್ಯಕರ್ತರು ಇದ್ದರು.


ಪೊಲೀಸರು ಕಾಂಗ್ರೆಸ್ ನಾಯಕರಿಗೆ ರೆಸಾರ್ಟ್ ಒಳಗೆ ಹೋಗಲು ಬಿಡಲಿಲ್ಲ. ಇದರಿಂದಾಗಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಹೊರಗೆ ಧರಣಿ ನಡೆಸಿದರು. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ಏಕಾಏಕಿ ಧರಣಿ ಆರಂಭಿಸಿದ್ದರಿಂದ ಪೊಲೀಸರಿಗೆ ಏನು ಮಾಡಬೇಕೆಂದು ಒಂದು ಕ್ಷಣ ತೋಚದಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಕಾಂಗ್ರೆಸ್ ನಾಯಕರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದರು. 

ಇಂದು ಏನು ನಡೆಯಿತು?: ಮಧ್ಯ ಪ್ರದೇಶದ 21 ಜನ ಬಂಡಾಯ ಕಾಂಗ್ರೆಸ್ ಶಾಸಕರಲ್ಲಿ ಹಲವರು ಕಳೆದ ಹಲವು ದಿನಗಳಿಂದ ಬೆಂಗಳೂರಿನ ಯಲಹಂಕ ಬಳಿಯ ರಮಡ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರ ರಕ್ಷಣೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ಕೂಡಿಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕರು ಇಷ್ಟು ದಿನ ಆರೋಪಿಸುತ್ತಲೇ ಬಂದಿದ್ದರು.


ಮಧ್ಯ ಪ್ರದೇಶದ ಸರ್ಕಾರದ ಬಿಕ್ಕಟ್ಟು ಮುಂದುವರಿದೇ ಇದೆ. ಇದಕ್ಕೆ ಇತಿಶ್ರೀ ಹಾಡಿ ಬಂಡಾಯ ಶಾಸಕರ ಮನವೊಲಿಸಿ ಅಲ್ಲಿಗೆ ವಾಪಸ್ ಕರೆದುಕೊಂಡು ಹೋಗಬೇಕೆಂದು ಕಳೆದ ತಡರಾತ್ರಿ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದರು. 


ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು. ಅಲ್ಲಿ ಕೆಲ ಹೊತ್ತು ಮಾತುಕತೆ ನಡೆಸಿ ಇಂದು ಬೆಳಗ್ಗೆ ನೇರವಾಗಿ ಯಲಹಂಕದ ರಮಡ ರೆಸಾರ್ಟ್ ಬಳಿ ತೆರಳಿದರು. ಹೊಟೇಲ್ ಒಳಗೆ ಹೋಗಿ ಶಾಸಕರನ್ನು ಭೇಟಿ ಮಾಡಲು ಅನುವು ಮಾಡಿಕೊಡಿ ಎಂದು ಪೊಲೀಸರಲ್ಲಿ ಕೇಳಿಕೊಂಡರು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಆಕ್ರೋಶಗೊಂಡು ರೆಸಾರ್ಟ್ ಹೊರಗೆ ಧರಣಿ ನಡೆಸಿದರು. 


ಧರಣಿ ನಿರತ ಕಾಂಗ್ರೆಸ್ ನಾಯಕರನ್ನು ಅಲ್ಲಿಂದ ಕಳುಹಿಸಲು ಪೊಲೀಸರು ಶತಪ್ರಯತ್ನ ಮಾಡಿದರು. ಆದರೆ ನಾಯಕರು ಜಪ್ಪೆಂದರೂ ಸ್ಥಳ ಬಿಟ್ಟು ಕದಲಲು ಸಿದ್ದರಿರಲಿಲ್ಲ. ಸ್ಥಳದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನರು ಸೇರಿ ಟ್ರಾಫಿಕ್ ಜಾಮ್ ಉಂಟಾಯಿತು.

ಬೆಳ್ಳಂಬೆಳಗ್ಗೆ ಆ ಹಾದಿಯಲ್ಲಿ ಓಡಾಡುವ ನಾಗರಿಕರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿತು. ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕೂರಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದವು.

ಇದೀಗ ಡಿ ಕೆ ಶಿವಕುಮಾರ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ತಮಗೆ ರೆಸಾರ್ಟ್ ಒಳಗೆ ಹೋಗಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

ಹಲವು ಶಾಸಕರ ರಾಜೀನಾಮೆಯಿಂದಾಗಿ ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು, ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕಮಲನಾಥ್ ವಿಳಂಬ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.


ತಕ್ಷಣವೇ ಬಹುಮತ ಸಾಬೀತುಪಡಿಸಲು ಸೂಚನೆ ನೀಡಬೇಕೆಂದು ಕೋರಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸಲ್ಲಿಸಿದ್ದ ಅರ್ಜಿ ಸಂಬಂಧ ಇಂದು ಪ್ರತಿಕ್ರಿಯೆ ಸಲ್ಲಿಸುವಂತೆ ಕಮಲ್‌ನಾಥ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿನ್ನೆ ಸೂಚಿಸಿದೆ. ಕೊರೋನಾ ವೈರಸ್ ಸೋಂಕು ಕಾರಣ ನೀಡಿ, ಮಧ್ಯಪ್ರದೇಶ ವಿಧಾನಸಭೆಯ ಸ್ಪೀಕರ್ ಎನ್. ಪಿ. ಪ್ರಜಾಪತಿ, ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆಸಲು ರಾಜ್ಯಪಾಲ ಲಾಲ್ ಜಿ ಟಂಡನ್, ನೀಡಿದ್ದ ಸೂಚನೆಯನ್ನು ಪಾಲಿಸದೆ ಕಲಾಪವನ್ನು ಇದೇ 26ರವರೆಗೆ ಮುಂದೂಡಿದ ನಿರ್ಧಾರವನ್ನು ಪ್ರಶ್ನಿಸಿ, 9 ಮಂದಿ ಬಿಜೆಪಿ ಶಾಸಕರು ನಿನ್ನೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

#WATCH Karnataka: Congress leader Digvijaya Singh has now been placed under preventive arrest. He was sitting on dharna near Ramada hotel in Bengaluru, allegedly after he was not allowed by Police to visit it. 21 #MadhyaPradesh Congress MLAs are lodged at the hotel. pic.twitter.com/dP3me4qjw0

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com