ಕೊರೋನಾ ಗೆ ಮದ್ದಿಲ್ಲ: ನಿಯಂತ್ರಣವೇ ಮದ್ದು - ಕೇಂದ್ರ ಸಚಿವ ಸದಾನಂದಗೌಡ
ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಗೆ ಈವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಹೀಗಾಗಿ ರೋಗ ಬರದಂತೆ ನೋಡಿಕೊಳ್ಳುವುದೇ ಪರಿಹಾರ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
Published: 22nd March 2020 01:32 AM | Last Updated: 22nd March 2020 01:32 AM | A+A A-

ಸದಾನಂದ ಗೌಡ
ಬೆಂಗಳೂರು: ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಕೊರೋನಾ ವೈರಸ್ ಗೆ ಈವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಹೀಗಾಗಿ ರೋಗ ಬರದಂತೆ ನೋಡಿಕೊಳ್ಳುವುದೇ ಪರಿಹಾರ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪಕಾಲ ನಮ್ಮ ಸಾಮಾಜಿಕ ಬದುಕು, ಸಂಚಾರವನ್ನು ಕಡಿಮೆ ಮಾಡಬೇಕಿದೆ. ಕೊರೋನಾ ವಿರುದ್ಧ ಮೋದಿ ಸರ್ಕಾರ ಸಮರವನ್ನೇ ಸಾರಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು, ಬೇರೆ ಬೇರೆ ಸಂಘ-ಸಂಸ್ಥೆಗಳ ಜೊತೆಗೂಡಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಈ ಸೂಕ್ಷ್ಮ ಸಂದರ್ಭದಲ್ಲಿ ನಮ್ಮ ಜವಾಬ್ಧಾರಿ ಹೆಚ್ಚಿದ್ದು., ಇದಕ್ಕಾಗಿ ನಾಗರಿಕರ ಸಹಕಾರ ಬೇಕಾಗಿದೆ. ಹಾಗೆಯೇ ಹಿರಿಯ ನಾಗರಿಕರು ನಿಮ್ಮ ನಿಯಮಿತ ಆರೋಗ್ಯ ಪರೀಕ್ಷೆಯನ್ನು ಸ್ವಲ್ಪಕಾಲ ಮುಂದೂಡಿ. ಹೊರಗಡೆಯೂ ಜಾಸ್ತಿ ಓಡಾಡಬೇಡಿ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋಂಕು ತಗುಲಿದರೆ ಚೇತರಿಕೆ ಕಷ್ಟವಾಗುತ್ತದೆ. ನಮ್ಮ ಸಂಕಲ್ಪ ಮತ್ತು ಸಂಯಮ ನಮ್ಮನ್ನು ಮಾತ್ರವಲ್ಲದೇ ನಮ್ಮ ಬಂಧು-ಬಳಗ, ಸಮಾಜ, ದೇಶವನ್ನು ಕಾಪಾಡಬಲ್ಲುದು ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾಗರಿಕ ಬಂಧುಗಳೇ ಭಯಬೀಳಬೇಡಿ. ಆದರೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ನಿಮಗೆ ಕೊರೋನಾ ರೋಗದ ಲಕ್ಷಣಗಳೇನಾದರೂ ಕಾಣಿಸಿಕೊಂಡರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಅಥವಾ ನಮ್ಮ ಸಹಾಯವಾಣಿ ಸಂಖ್ಯೆ +91 11 23978046 ಕ್ಕೆ ಕರೆಮಾಡಿ ಎಂದು ವಿನಂತಿಸಿದ್ದಾರೆ.
ಆಹಾರ ದಿನಸಿಗಳು, ಹಾಲು, ಹಣ್ಣು-ಹಂಪಲು, ಔಷಧ, ಇಂದನ ಸೇರಿದಂತೆ ಜೀವನಾವಶ್ಯಕವಾದ ಎಲ್ಲ ವಸ್ತುಗಳ ಸರಬರಾಜು ಎಂದಿನಂತೆ ಮುಂದುವರಿಯುತ್ತದೆ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಭಯಬಿದ್ದು ಅನವಶ್ಯಕ ಖರೀದಿ, ದಾಸ್ತಾನು ಮಾಡಬೇಡಿ. ವಿಶ್ವವ್ಯಾಪಿಯಾಗಿರುವ ಕೊರೋನಾ ರೋಗವು ಭಾರತದ ಮೇಲೂ ಆರ್ಥಿಕ ದುಷ್ಪರಿಣಾಮ ಬೀರುವುದನ್ನು ನಿರೀಕ್ಷಿಸಲಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ಪ್ರಧಾನಿ ಮೋದಿ ಅವರು ಈಗಾಗಲೇ ಉನ್ನತಾಧಿಕಾರದ ಕಾರ್ಯದಳವನ್ನು ರಚಿಸಿದ್ದಾರೆ. ಬನ್ನಿ ನಾವೆಲ್ಲ ಮೋದಿಯವರೊಂದಿಗೆ ಕೈಜೋಡಿಸೋಣ. ಈ ಸವಾಲನ್ನು ಗೆಲ್ಲೋಣ ಎಂದಿದ್ದಾರೆ.
ಭಾನುವಾರ ಬೆಳಗಿನಿಂದ ರಾತ್ರಿ 9ರವರೆಗೆ ಸ್ವಯಂಪ್ರೇರಿತರಾಗಿ ಜನತಾ ಕರ್ಫ್ಯೂ ಆಚರಿಸಲು ಕರೆನೀಡಿದ್ದಾರೆ. ನಾವೆಲ್ಲ ಈ ಕರೆಗೆ ಸ್ಪಂದಿಸಿ ಧೃಡ ಸಂಕಲ್ಪ ಮಾಡೋಣ. ಪ್ರಧಾನಿ ಕರೆಗೆ ಓಗೊಟ್ಟು ಭಾನುವಾರ ಸ್ವಯಂಪ್ರೇರಿತರಾಗಿ ಜನತಾ ಕರ್ಫ್ಯೂ ಆಚರಿಸೋಣ. ಇದು ಕರೋನಾ ರೋಗ ಹರಡುವುದನ್ನು ತಡೆಯುವತ್ತ ಒಂದು ಪುಟ್ಟ ಹೆಜ್ಜೆ. ದೇಶದ ಹಿತಕ್ಕಾಗಿ ನಮ್ಮಿಂದ ಸಣ್ಣ ಸಹಯೋಗ ಎಂದು ಹೇಳಿದ್ದಾರೆ.
ಕೊರೋನಾ ರೋಗ ತಡೆಗಟ್ಟಲು ವೈದ್ಯರು, ಅರೆವೈದ್ಯರು, ವೈಮಾನಿಕ, ಸಾರಿಗೆ ಸಿಬ್ಬಂದಿ ಪೊಲೀಸರು, ಸೈನಿಕರು, ಸರ್ಕಾರಿ, ಅರೆಸರ್ಕಾರಿ ನೌಕರರು, ಮಾಧ್ಯಮದವರು - ಹೀಗೆ ಲಕ್ಷಾಂತರ ಜನ ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಮಾರ್ಚ್ 22ರಂದು ನಾವೆಲ್ಲ ನಮ್ಮ-ನಮ್ಮ ಮನೆಯಿಂದಲೇ 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ ಅವರಿಗೆಲ್ಲ ಕೃತಜ್ಞತೆ ಹೇಳೋಣ ಎಂದಿದ್ದಾರೆ.