ವಿಧಾನಪರಿಷತ್ ಚುನಾವಣೆ ಮೇಲೆ ನಿಂತಿದೆ ದೇವೇಗೌಡರ ರಾಜ್ಯಸಭೆ ಪ್ರವೇಶದ ಭವಿಷ್ಯ?

ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ರಾಜ್ಯಸಭೆ ಚುನಾವಣೆ ಎದುರಿಸಲು ಸಿದ್ಧತೆ ನಡೆಯುತ್ತಿದ್ದು, ದೇವೇಗೌಡರು ರಾಜ್ಯಸಭೆ ಪ್ರವೇಶಿಸುವುದು ಜೂನ್ ನಲ್ಲಿ ನಡೆಯಲಿರುವ ಮೇಲ್ಮನೆ ಚುನಾವಣೆಯನ್ನು ಅವಲಂಬಿಸಿದೆ.
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ರಾಜ್ಯಸಭೆ ಚುನಾವಣೆ ಎದುರಿಸಲು ಸಿದ್ಧತೆ ನಡೆಯುತ್ತಿದ್ದು, ದೇವೇಗೌಡರು ರಾಜ್ಯಸಭೆ ಪ್ರವೇಶಿಸುವುದು ಜೂನ್ ನಲ್ಲಿ ನಡೆಯಲಿರುವ ಮೇಲ್ಮನೆ ಚುನಾವಣೆಯನ್ನು ಅವಲಂಬಿಸಿದೆ.

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಜೂನ್ ಅಂತ್ಯದಲ್ಲಿ ತೆರವಾಗಲಿರುವ ಏಳು ಸ್ಥಾನಗಳ ಚುನಾವಣೆ ಇದೀಗ ರಾಜ್ಯಸಭೆ ಚುನಾವಣೆಗೆ ಸೆಮಿ ಫೈನಲ್ ಆಗಿ ಪರಿಣಮಿಸಿದೆ.

ಜೂನ್ ಅಂತ್ಯದಲ್ಲಿ ಜೆಡಿಎಸ್ ನಿಂದ ಆಯ್ಕೆಯಾಗಿರುವ ಕುಪೇಂದ್ರ ರೆಡ್ಡಿ ಅವರ ಅಧಿಕಾರದ ಅವಧಿ ಮುಗಿಯಲಿದೆ. ಇವರಿಂದ ತೆರವಾಗುವ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ದೇವೇಗೌಡರು ಮತ್ತೆ ರಾಷ್ಟ್ರ ರಾಜಕಾರಣದ ಅಖಾಡ ಪ್ರವೇಶಿಲು ಇಚ್ಛಿಸಿದ್ದಾರೆ. ಆದರೆ ರಾಜ್ಯಸಭೆಗೆ ಗೌಡರು ಪ್ರವೇಶ ಪಡೆಯಬೇಕಾದರೆ ಮೇಲ್ಮನೆಗೆ ಜೆಡಿಎಸ್ ನಿಂದ ತೆರವುಗೊಳ್ಳಲಿರುವ ಒಂದು ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಬೇಕೆಂಬ ಷರತ್ತನ್ನು ಕಾಂಗ್ರೆಸ್ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಗೆ ಪ್ರವೇಶಿಸಲು ಒಟ್ಟು 48 ಮತಗಳು ಬೇಕು. ಆದರೆ ವಿಧಾನಸಭೆಯಲ್ಲಿ ಜೆಡಿಎಸ್ ಗೆ ಸೂಕ್ತ ಸಂಖ್ಯಾಬಲವಿಲ್ಲ. ಜೆಡಿಎಸ್ ಶಾಸಕರ ಬಲ ಕೇವಲ 34. ಹೀಗಾಗಿ ಬಾಕಿ ಉಳಿಯುವ 14 ಮತಗಳನ್ನು ಕಾಂಗ್ರೆಸ್ ನಿಂದ ಜೆಡಿಎಸ್ ಪಡೆಯಬೇಕಿದೆ.

ಹೀಗಾಗಿ ಜೂನ್ ನಲ್ಲಿ ಏಳು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ತನ್ನ ಪಾಲಿನ ಒಂದು ಸ್ಥಾನ ತ್ಯಾಗ ಮಾಡಬೇಕಾಗಿದೆ. ಜೆಡಿಎಸ್ ಸ್ಥಾನ ಬಿಟ್ಟುಕೊಟ್ಟರೆ ರಾಜ್ಯಸಭೆ ಪ್ರವೇಶಕ್ಕೆ ದೇವೇಗೌಡರಿಗೆ ಬೇಕಾಗಿರುವ 14 ಮತಗಳನ್ನು ಕಾಂಗ್ರೆಸ್ ನೀಡಲು ಸಿದ್ಧವಿದೆ ಎನ್ನಲಾಗಿದೆ.
 
ಈ ಸಂಬಂಧದ ಕಾರ್ಯತಂತ್ರಗಳು ನಡೆಯುತ್ತಿದ್ದು, ಕೊಟ್ಟು ತೆಗೆದುಕೊಳ್ಳುವ ಲೆಕ್ಕಾಚಾರದ ಮೇಲೆ ಗೌಡರ ರಾಜ್ಯಸಭೆ ಪ್ರವೇಶ ತೀರ್ಮಾನವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com