ಡ್ರಗ್ಸ್ ಮಾಫಿಯಾ ತನಿಖೆಯ ಹಾದಿತಪ್ಪಬಾರದು: ಹೆಚ್.ಡಿ.ಕುಮಾರಸ್ವಾಮಿ

ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ತನಿಖೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ನಡೆದುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ತನಿಖೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ನಡೆದುಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ನಿಲ್ಲಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಆದರೆ, ತನಿಖೆ ಹಂತದಲ್ಲಿ ವಿಷಯಾಂತರವಾಗಬಾರದು ಮತ್ತು ದಾರಿ ತಪ್ಪಬಾರದು ಎಂದು ಹೇಳಿದರು.

ಕ್ಯಾಸಿನೋ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕ್ಯಾಸಿನೋ ವಿಚಾರವೇ ಬೇರೆ. ಆದರೆ, ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವಂತಹ ದಂಧೆ ನಡೆಯುವುದು ನೈಟ್ ಬಾರ್‍ಗಳಲ್ಲಿ ಎಂದರು. ಬೆಂಗಳೂರು ನಗರದಲ್ಲಿ ಮಧ್ಯರಾತ್ರಿ 12 ಗಂಟೆಯಲ್ಲಿ ಅಂತಹ ಕಡೆಗಳಲ್ಲಿ ಹೋದರೆ ನಾವು ಭಾರತದಲ್ಲಿದ್ದೇವೆಯೇ ಎಂಬ ಅನುಮಾನ ಬರುತ್ತದೆ ಎಂದರು.

ಶಾಸಕ ಜಮೀರ್ ಅಹಮ್ಮದ್‍ಖಾನ್ ಮಾಡಿರುವ ಆರೋಪಗಳಿಗೆ ಉತ್ತರ ಕೊಡಬೇಕಾಗಿಲ್ಲ ಎಂದ ಅವರು ಜೆಡಿಎಸ್ ಶಾಸಕರು ಮತ್ತು ಮುಖಂಡರು ಶ್ರೀಲಂಕಾಕ್ಕೆ ಹೋಗಿದ್ದು ನಿಜ. ಪಕ್ಷದ ವಿಚಾರವಾಗಿ ಚರ್ಚಿಸಲು ಹೋಗಿದ್ದೆವು. ಅದಕ್ಕೂ ಇದಕ್ಕೂ ಸಂಬಂಧವಿಲ್ಲ.

ಹಳೆ ಸ್ನೇಹಿತರು ಏಕೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೋ ಗೊತ್ತಿಲ್ಲ. ಗೋವಾ ಮೊದಲಾದ ಕಡೆ ಹೋದರೆ ಖರ್ಚು ಜಾಸ್ತಿಯಾಗಲಿದೆ ಎಂಬ ಕಾರಣಕ್ಕೆ ಕೊಲಂಬೋಗೆ ಹೋಗಿದ್ದೆವು. ಆ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದರು.

ಡ್ರಗ್ಸ್ ದಂಧೆ ವ್ಯವಹಾರಗಳನ್ನು ತಡೆಯಲು ತಾವು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು. ನೈಟ್ ಬಾರ್‍ಗಳಲ್ಲಿ ನಡೆಯುವ ಅಕ್ರಮ ವ್ಯವಹಾರಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಎಂದರು.

ಚಿತ್ರನಿರ್ಮಾಪಕರಾಗಿರುವ ತಮಗಾಗಲೀ ತಮ್ಮ ಪುತ್ರ ನಿಖಿಲ್‌ಗಾಗಲಿ ಚಿತ್ರರಂಗದಲ್ಲಿ ಡ್ರಗ್ಸ್‌ನಂತಹ ಅನುಭವಗಳಾಗಿಲ್ಲ. ವ್ಯರ್ಥ ಆರೋಪಗಳಿಗೆಲ್ಲ ತಾವು ಉತ್ತರಿಸುವುದೂ ಇಲ್ಲ ಎಂದರು.

ಡ್ರಗ್ಸ್ ಬರೀ ಚಿತ್ರರಂಗದಲ್ಲಷ್ಟೇ ಇಲ್ಲ ಎಲ್ಲ ಕಡೆಯಲ್ಲಿಯೂ ಇದೆ ಎಂದ ಕುಮಾರಸ್ವಾಮಿ, ತಾವು ಮುಖ್ಯಮಂತ್ರಿಯಾಗಿದ್ದ ಹದಿನಾಲ್ಕು ತಿಂಗಳಿನಲ್ಲಿಯೇ ಬಾರ್‌ಗಳಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಕಠಿಣಕ್ರಮ ಜರುಗಿಸಲು ತನಿಖೆಗೆ ಆದೇಶಿಸಲಾಗಿತ್ತು. ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರವನ್ನೂ ನೀಡಿದ್ದೆ. ಹೀಗಿದ್ದರೂ ತಾವು ೨೦೧೪ರಲ್ಲಿ ಪಕ್ಷದ ಮುಖಂಡರ ಜೊತೆಗೆ ಪ್ರವಾಸ ಕೈಗೊಂಡಿದ್ದನ್ನು ಈಗ ಏಕೆ ಪ್ರಸ್ತಾಪಿಸುತ್ತಿದ್ದಾರೋ ಗೊತ್ತಿಲ್ಲ ಎಂದರು.

ಕ್ಯಾಸಿನೋದಲ್ಲಿ ಇಂತಹದ್ದೆಲ್ಲ ನಡೆಯುತ್ತದೆ ಎನ್ನುವ ಭಾವನೆಯಿದೆ. ಆದರೆ ಅದು ಸರಿಯಲ್ಲ. ನೈಟ್‌ಬಾರ್‌ಗಳಲ್ಲಿಯೂ ಡ್ರಗ್ಸ್ ನಡೆಯುತ್ತದೆ. ಹಿಂದೆ ಬೆಂಗಳೂರಿನ ಮಲ್ಯ ರಸ್ತೆಗೆ ಹೋದರೆ ವಿದೇಶದಲ್ಲಿದ್ದಂತಹ ವಾತಾವರಣವಿತ್ತು. ಈಗ ಹೇಗಿದೆಯೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com