ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ: ಮಾಧುಸ್ವಾಮಿ, ಎಚ್‌.ಕೆ.ಪಾಟೀಲ್ ನಡುವೆ ಜಟಾಪಟಿ

ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ ೨೦೨೦ಕ್ಕೆ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ. ಆದರೆ, ಕೆಲವು ಸೇರ್ಪಡೆ ಮಾಡಬೇಕೆಂಬ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಸಲಹೆಯನ್ನು ಸರ್ಕಾರ ಒಪ್ಪಲಿಲ್ಲ.
ವಿಧಾನಸಭೆ
ವಿಧಾನಸಭೆ

ಬೆಂಗಳೂರು: ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ ೨೦೨೦ಕ್ಕೆ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ. ಆದರೆ, ಕೆಲವು ಸೇರ್ಪಡೆ ಮಾಡಬೇಕೆಂಬ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಸಲಹೆಯನ್ನು ಸರ್ಕಾರ ಒಪ್ಪಲಿಲ್ಲ. ಇದರಿಂದ ಬೇಸರಗೊಂಡ ಎಚ್.ಕೆ.ಪಾಟೀಲ್ ಸರ್ಕಾರ ಮತ್ತು ಸ್ಪೀಕರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೊರೋನಾ ವಾರಿಯರ್ಸ್ ಮೇಲಿನ ದಾಳಿ ತಡೆಯಲು ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೊಳಿಸಿತ್ತು. ಇದೀಗ ವಿಧೇಯಕ ಮಂಡನೆ ಮಾಡಿ ಶಾಸನ ಸಭೆ ಒಪ್ಪಿಗೆ ಪಡೆಯಲು ಮುಂದಾದಾಗ ಎಚ್.ಕೆ.ಪಾಟೀಲ್ ಅವರು, ಪ್ರತಿಪಕ್ಷವನ್ನು, ಶಾಸಕರ ಅಭಿಪ್ರಾಯವನ್ನು ಬುಲ್ಡೋಜ್ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಭ್ರಷ್ಟಾಚಾರ ಎಸಗುವ ಅಧಿಕಾರಿಗಳ ವಿರುದ್ಧ ಸಿಎಜಿ, ಲೋಕಾಯುಕ್ತ ತನಿಖೆಗೊಪ್ಪಿಸುವುದು, ವೆಬ್‌ಸೈಟ್‌ನಲ್ಲಿ ತನಿಖೆಯ ದೈನಂದಿನ ಪ್ರಕಟಣೆ ಹೊರಡಿಸುವುದು, ೩ ತಿಂಗಳ ಆಡಿಟ್ ವರದಿ ನೀಡುವುದು, ಶಾಸಕರಿಗೂ ಮಾಹಿತಿ ಲಭ್ಯವಾಗುವಂತೆ ಮಾಡಬೇಕೆಂಬುದನ್ನೂ ತಿದ್ದುಪಡಿ ವಿಧೇಯಕಕ್ಕೆ ಸೇರಿಸಬೇಕು ಎಂದು ಎಚ್ ಕೆ ಪಾಟೀಲ್ ಒತ್ತಾಯಿಸಿದರು.

ಆದರೆ, ಇದಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಲ್ ಮಂಡನೆಯಾಗಿ ಮೂರು ದಿನವಾಗಿದೆ. ಈಗ ಹೆಚ್ಚುವರಿ ಅಂಶ ಸೇರ್ಪಡೆ ತಾಂತ್ರಿಕವಾಗಿ ಸರಿಯಲ್ಲ ಎಂಬ ಸಚಿವ ಜಗದೀಶ್ ಶೆಟ್ಟರ್ ಮಾತಿಗೆ ಮಾಧುಸ್ವಾಮಿ ಕೂಡ ದನಿಗೂಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್, ಎಚ್.ಕೆ.ಪಾಟೀಲರ ಸಲಹೆ ಉತ್ತಮವಾಗಿದೆ. ಮುಂದೆ ಯಾವುದಾದರೂ ಸಂದರ್ಭದಲ್ಲಿ ಬಳಸಿಕೊಳ್ಳಿ ಎಂದರು.

ಬಳಿಕ ವಿಧೇಯಕ ಅನುಮೋದನೆ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಎಚ್.ಕೆ.ಪಾಟೀಲ್ ಸಿಟ್ಟಿಗೆದ್ದರು. ನನ್ನ ಸಲಹೆ ಪರಿಗಣಿಸಿಲ್ಲ. ಸ್ಪೀಕರ್ ಅವರು ಸರ್ಕಾರದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ. ಬುಲ್ಡೋಜ್ ಮಾಡುವುದು ಸರಿಯಲ್ಲ ಎಂಬಿತ್ಯಾದಿಯಾಗಿ ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com