ಅವಧಿ ಮೀರಿದ ರೆಮಿಡಿಸಿವಿರ್ ಇಂಜೆಕ್ಷನ್ ನೀಡಲು ಅನುಮೋದನೆ: ಇದೆಂತಹ ದುಸ್ಥಿತಿಗೆ ಬಂದಿದೆ ಸರ್ಕಾರ- ಕಾಂಗ್ರೆಸ್

ಒಂದು ಕಡೆ ರೆಮಿಡಿಸಿವಿರ್ ಕೊರತೆಯೇ ಇಲ್ಲ ಎನ್ನುವ ಬಂಡತನದ ಸಮರ್ಥನೆ  ಮಾಡಿಕೊಳ್ಳುತ್ತಲೇ ಇನ್ನೊಂದು ಕಡೆ ಅವಧಿ ಮೀರಿದ ರೆಮಿಡಿಸಿವಿರ್ ಇಂಜೆಕ್ಷನ್ ನೀಡಲು ರಾಜ್ಯಸರ್ಕಾರ ಅನುಮೋದನೆ ನೀಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ಕಡೆ ರೆಮಿಡಿಸಿವಿರ್ ಕೊರತೆಯೇ ಇಲ್ಲ ಎನ್ನುವ ಬಂಡತನದ ಸಮರ್ಥನೆ  ಮಾಡಿಕೊಳ್ಳುತ್ತಲೇ ಇನ್ನೊಂದು ಕಡೆ ಅವಧಿ ಮೀರಿದ ರೆಮಿಡಿಸಿವಿರ್ ಇಂಜೆಕ್ಷನ್ ನೀಡಲು ರಾಜ್ಯಸರ್ಕಾರ ಅನುಮೋದನೆ ನೀಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತ ಚಾನಲ್ ವೊಂದರ ವರದಿಯನ್ನು ತನ್ನ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುವ ಕಾಂಗ್ರೆಸ್, ಇದೆಂತಹ ದುಸ್ಥಿತಿಗೆ ಬಂದಿದೆ ಸರ್ಕಾರ. ಜನರ ಜೀವದ ಜೊತೆ ಬಿಜೆಪಿ ಚೆಲ್ಲಾಟವಾಡುತ್ತಿರುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? ಕೊರತೆ ಇಲ್ಲವೆಂದಮೇಲೆ ಈ ಸರ್ಕಸ್ ಏಕೆ ಎಂದು ಪ್ರಶ್ನಿಸಿದೆ.

ಜಿಎಸ್ ಟಿ, ನೆರೆ, ಬರ ಪರಿಹಾರಗಳಿಂದ ಹಿಡಿದು ಕೊರೋನಾದವರೆಗೂ ಕೇಂದ್ರದಿಂದ ರಾಜ್ಯಕ್ಕೆ  ಅನ್ಯಾಯವೇ. ಲಸಿಕೆ ಹಂಚಿಕೆಯಲ್ಲೂ ತಾರತಮ್ಯ.ಜನಸಂಖ್ಯೆ ಆಧಾರದಲ್ಲಿ ಕರ್ನಾಟಕ ಹಲವು ರಾಜ್ಯಗಳಿಗಿಂತ ಹೆಚ್ಚು ಅರ್ಹತೆ ಹೊಂದಿದ್ದರೂ ಕೇವಲ 75ಲಕ್ಷ ಡೋಸ್‌ಗಳಷ್ಟೇ ದೊರಕಿದ್ದು, ಗುಜರಾತ್‌ಗೆ ಸಿಂಹಪಾಲು ಸಿಕ್ಕಿದೆ.25 ಸಂಸದರು ಎಲ್ಲಿ ಗೆಣಸು ಕೀಳುತ್ತಿದ್ದಾರೋ ಹುಡುಕಬೇಕಿದೆ! ಎಂದು ಕಿಡಿಕಾರಿದೆ.

ಗರಿಬ್ ಕಲ್ಯಾಣ್ ಯೋಜನೆಯಡಿಯಲ್ಲಿ 80 ಕೋಟಿ ಭಾರತೀಯರು ಬರುತ್ತಾರೆಂದರೆ, ನರೇಂದ್ರಮೋದಿ ಅಧಿಕಾರಾವಧಿಯಲ್ಲಿ ಭಾರತೀಯರು ಅತಿ ಹೆಚ್ಚು ಬಡತನಕ್ಕೆ ತಳ್ಳಲ್ಪಟ್ಟಿದ್ದನ್ನು ಸೂಚಿಸುತ್ತದೆ.ಈ ಆರ್ಥಿಕ ಸಂಕಷ್ಟ ಕಾಲದಲ್ಲಿ ಲಸಿಕೆಗಳನ್ನೇಕೆ ಸರ್ವರಿಗೂ ಉಚಿತವಾಗಿ ನೀಡದೆ ರಾಜ್ಯಗಳಿಗೆ ಹೊರೆ ಹೊರಿಸಿದ್ದು ಏಕೆ ಹೇಳುವಿರಾ ಎಂದು ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com