ಕೇಂದ್ರ ಸಚಿವ ಸಂಪುಟ ವಿಸ್ತರಣೆ: ರಾಷ್ಟ್ರ ರಾಜಕಾರಣದಲ್ಲಿ ದಲಿತ ನಾಯಕ ನಾರಾಯಣಸ್ವಾಮಿ

ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ಸದಸ್ಯ ಎ.ನಾರಾಯಣಸ್ವಾಮಿಯವರಿಗೆ ಮೋದಿ ಸಂಪುಟದಲ್ಲಿ ಸಚಿವರಾಗುವ ಅವಕಾಶ ಒದಗಿ ಬಂದಿದ್ದು, ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ನಾರಾಯಣಸ್ವಾಮಿ
ನಾರಾಯಣಸ್ವಾಮಿ

ಚಿತ್ರದುರ್ಗ: ಚಿತ್ರದುರ್ಗದ ಲೋಕಸಭಾ ಕ್ಷೇತ್ರದ ಸದಸ್ಯ ಎ.ನಾರಾಯಣಸ್ವಾಮಿಯವರಿಗೆ ಮೋದಿ ಸಂಪುಟದಲ್ಲಿ ಸಚಿವರಾಗುವ ಅವಕಾಶ ಒದಗಿ ಬಂದಿದ್ದು, ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಬಹುನಿರೀಕ್ಷಿತ ಕೇಂದ್ರ ಮಂತ್ರಿ ಮಂಡಲದ ವಿಸ್ತರಣೆ ಮತ್ತು ಪುನಾರಚನೆ ನಿನ್ನೆಯಷ್ಟೇ ಭರ್ಜರಿಯಾಗಿಯೇ ನೆರವೇರಿದ್ದು, ಸಚಿವ ಸಂಪುಟ ಪುನಾರಚನೆಯಲ್ಲಿ ಕರ್ನಾಟಕದ ಒಬ್ಬ ಸಚಿವರ ಕೈಬಿಟ್ಟು, ಹೊಸದಾಗಿ ನಾಲ್ವರಿಗೆ ಅವಕಾಶ ಮಾಡಿಕೊಡುವ ಮೂಲಕ 25 ಸಂಸದರನ್ನು ಆರಿಸಿ ಕಳುಹಿಸಿದ್ದ ಕರ್ನಾಟಕಕ್ಕೆ ಪ್ರಧಾನಿ ಮೋದಿಯವರು ಬಂಪರ್ ಕೊಡುಗೆ ನೀಡಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2 ವರ್ಷಗಳ ಬಳಿಕ ನಡೆಸಿದ ಮಂತ್ರಿಮಂಡಲ ಪುನಾರಚನೆಯಲ್ಲಿ ಬಹುತೇಕ ಎಲ್ಲಾ ಜಾತಿ, ಸಮುದಾಯಗಳಿಗೂ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕಲ್ಪಿಸುವ ಯತ್ನ ಮಾಡಿದ್ದಾರೆ. ಈ ಬೆಳವಣಿಗೆಯು 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಸಂಸತ್ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. 

ರಾಜ್ಯ ಖಾತೆ ಸಚಿವರಾಗಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ, ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಸಚಿವರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಪರಿಶಿಷ್ಟ ಎಡಗೈ ಸಮುದಾಯಕ್ಕೆ ಸೇರಿದ ನಾರಾಯಣಸ್ವಾಮಿಯವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನವರು. ಈ ಹಿಂದೆ ನಾಲ್ಕು ಬಾರಿ ಶಾಸಕ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ನಾರಾಯಣಸ್ವಾಮಿಯವರಿಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆನೇಕಲ್ ನಲ್ಲಿ ಸೋತಿದ್ದರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಡೆ ವಲಸೆ ಬಂದಿದ್ದ ನಾರಾಯಣಸ್ವಾಮಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು. 

1996ರಲ್ಲಿ ಆನೇಕಲ್ ಪುರಸಭೆ ಸದಸ್ಯರಾಗಿ ಆಯ್ಕೆಯಾಗುವುದರ ಮೂಲಕ ರಾಜಕೀಯ ಪ್ರವೇಶಿಸಿದ್ದ ನಾರಾಯಣಸ್ವಾಮಿಯವರು ಮರು ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಥಮ ಬಾರಿಗೆ ಗೆದ್ದಿದ್ದರು. ನಂತರ ಕ್ರಮವಾಗಿ 1999, 2004, 2008ರಲ್ಲಿ ಸತತವಾಗಿ ಗೆಲವು ಸಾಧಿಸಿದ್ದರು. 2010ರ ಯಡಿಯೂರಪ್ಪ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. 

ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅದ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 

ಯಾವುದೇ ವಿವಾದಗಳಲ್ಲೂ ಸಿಲುಕಿಕೊಳ್ಳದ ರಾಜಕಾರಣಿ ನಾರಾಯಣಸ್ವಾಮಿ ಆಗಿದ್ದಾರೆ. ಸಂಸದರಾಗಿ ಆಯ್ಕೆಯಾದ ಕೂಡಲೇ ನಾರಾಯಣಸ್ವಾಮಿಯವರು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬಾಕಿ ಉಳಿದಿದ್ದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೆಗೆತ್ತಿಕೊಂಡು ತ್ವರಿಗತಿಯಲ್ಲಿ ಈ ಕಾರ್ಯಗಳು ಸಾಗುವಂತೆ ಮಾಡಿದ್ದರು. ತಮ್ಮ ಪರಿಶ್ರಮದ ಮೂಲಕ ಭದ್ರೆಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುವಂತೆ ಮಾಡಿದ್ದರು. 

ನೇರ, ನಿಷ್ಠೂರ ಮನೋಭಾವದಿಂದ ಪರಿಚಿತರಾಗಿರುವ ನಾರಾಯಣಸ್ವಾಮಿ ಅವರು ಮಾದಿಗ ಸಮುದಾಯದ ಪ್ರಬಲ ನಾಯಕ ಕೂಡ ಹೌದು. ಸಮಾಜಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಒಳಮೀಸಲಾತಿಯ ವಿಚಾರವನ್ನು ಮುನ್ನೆಲೆಗೆ ತಂದು ಚರ್ಚೆ ಹುಟ್ಟುಹಾಕಿದರು. ಒಳಮೀಸಲಾತಿಯ ಪ್ರಬಲವಾಗಿ ಸಮರ್ಥನೆ ಮಾಡುವ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದು, ಬಿಜೆಪಿಗೆ ಇನ್ನಷ್ಟು ಬಲ ಸಿಗುವ ನಿರೀಕ್ಷೆ ಇದೆ.

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ನಾರಾಯಣ ಸ್ವಾಮಿಯವರು, ಕರ್ನಾಟಕದಲ್ಲಿ ಬಾಕಿ ಇರುವ ಎಲ್ಲಾ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದಾರೆ. 

ಭದ್ರಾ ಮೇಲ್ದೆಂಡೆ ಯೋಜನೆಗೆ ರಾಷ್ಟ್ರೀಯ ಯೋಜನಾ ಸ್ಥಾನಮಾನ ನೀಡುವುಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ. ತುಮಕೂರು-ದಾವಣಗರೆ ನೇರ ರೈಲ್ವೆ ಮಾರ್ಗವನ್ನು ವೇಗಗತಿಯಲ್ಲಿ ಸಾಗುವಂತೆ ಮಾಡಲಾಗುತ್ತದೆ. ದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ದೇಶವನ್ನು ವಿಶ್ವ ಗುರುವನ್ನಾಗಿ ಮಾಡುವ ಸಲುವಾಗಿ ನಿರಾಯಸದಿಂದ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೆಲಸ ಮಾಡಲು ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ.

ಎ.ನಾರಾಯಣಸ್ವಾಮಿ
ಕರ್ನಾಟಕದ ಚಿತ್ರದುರ್ಗದ ಲೋಕಸಭಾ ಸಂಸದರಾಗಿದ್ದಾರೆ.
64 ವರ್ಷದ ನಾರಾಯಣಸ್ವಾಮಿ ಮೊದಲ ಅವಧಿಯಲ್ಲೇ ಸಂಪುಟ ಸೇರಿಕೊಂಡಿದ್ದಾರೆ,
ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು,
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಬಿ.ಎ ಪದವಿ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com