ಬಿ.ಎಲ್.ಸಂತೋಷ್ ರಾಜ್ಯದ ಮುಂದಿನ ಮುಖ್ಯಮಂತ್ರಿ: ಬಿಜೆಪಿ ಮೂಲಗಳು

ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. 
ಬಿಎಲ್ ಸಂತೋಷ್
ಬಿಎಲ್ ಸಂತೋಷ್
Updated on

ಬೆಂಗಳೂರು; ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. 

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಯಾರನ್ನ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದ್ದು, ಇದಕ್ಕಾಗಿ ಧರ್ಮೇಂದ್ರ ಪ್ರಧಾನ್, ಕರ್ನಾಟಕ ಸಿಎಂ ಆಯ್ಕೆಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಆದರೆ, ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸುವ ಮೊದಲೇ ಬಿಎಲ್ ಸಂತೋಷ್ ಅವರು ನಿನ್ನೆ ರಾತ್ರಿಯೆ ಬೆಂಗಳೂರಿಗೆ ಆಗಮಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. 

ಈ ನಡುವೆ ಬಿಜೆಪಿ ಮೂಲಗಳು ಬಿ.ಎಲ್.ಸಂತೋಷ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್'ಗೆ ಹೆಚ್ಚಿನ ಒಲವಿದ್ದು, ಈ ಕುರಿತು ಮಂಗಳವಾರ ಅಥವಾ ಬುಧವಾರ ಅಧಿಕೃತ ಮಾಹಿತಿಗಳು ಲಭ್ಯವಾಗಲಿದೆಎಂದು ತಿಳಿಸಿವೆ. 

ಸಿಎಂ ಸ್ಥಾನಕ್ಕೆ ಬಿ.ಎಲ್.ಸಂತೋಷ್ ಅವರ ಹೆಸರು ಈಗಾಗಲೇ ಅಂತಿಮಗೊಂಡಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು, ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಿ ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಬಿಎಲ್.ಸಂತೋಷ್ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಬಿಜೆಪಿಯೊಂದಿಗಿನ ಅವರ ಒಡನಾಟ 1993ರಿಂದಲೂ ಇದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಅನೇಕ ರೀತಿಯಲ್ಲಿ ಗುರುತಿಸಿಕೊಂಡಿರುವ ಬಿ.ಎಲ್.ಸಂತೋಷ್ ಅವರು, ಬಿಜೆಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ. ಅತ್ಯಂತ ಮಿತವ್ಯಯದ ಜೀವನಶೈಲಿ ನಡೆಸುತ್ತಿರುವ ಸಂತೋಷ್ ಅವರನ್ನು ಪಕ್ಷದ ವಲಯದಲ್ಲಿ ಸಂತೋಷ್ ಜೀ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. 

ಬಿ.ಎಲ್.ಸಂತೋಷ್ ಅವರನ್ನು ಸಿಎಂ ಮಾಡಿದ್ದೇ ಆದರೆ, ಪಕ್ಷದಲ್ಲಿ ಬಂಡಾಯ ಶುರುವಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂತೋಷ್ ಹಾಗೂ ಬಿಜೆಪಿಯ ಇತರೆ ಹಿರಿಯ ನಾಯಕರು ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಅವರೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪುರ್ ಅವರು, ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿದ್ದಾರೆಂದು ಹೇಳಲಾಗುತ್ತಿದ್ದು, ಸೋಮವಾರ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆಂದು ತಿಳಿದುಬಂದಿದೆ. 

ಈ ಎಲ್ಲಾ ಬೆಳವಣಿಗೆ ಬಗ್ಗೆ ಮಾಹಿತಿ ತಿಳಿದಿದಿದ್ದ ಯಡಿಯೂರಪ್ಪ ಅವರು, ನಿನ್ನೆ ಭಾಷಣ ಮಾಡುವ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ಕಿಡಿಕಾರಿದ್ದರು. 

ಬದಲಾದ ರಾಜಕೀಯದಲ್ಲಿ ಜೆಡಿಎಸ್ ಜೊತೆ ಸೇರಿ ಸರಕಾರವನ್ನು ರಚಿಸಿದೆವು. ಕುಮಾರಸ್ವಾಮಿ ಮುಖ್ಯಮಂತ್ರಿ, ನಾನು ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದೆವು. 20 ತಿಂಗಳ ಅವಧಿಗೆ ಅಧಿಕಾರ ಹಂಚಿಕೆ ಒಪ್ಪಂದವಾಗಿತು. ಮೊದಲ ಅವಧಿ ಪೂರೈಸಿದ ಎಚ್. ಡಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕಿದರು. ಒಂದೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರಿಸಬೇಕಿತ್ತು. ಆಗ ಅಪ್ಪ ಮಗ ಸೇರಿ ಷರತ್ತುಗಳನ್ನು ಹಾಕಿದರು, ನಾನು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡ ವಿರುದ್ದ ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com