ಮುನಿಸು ದೂರಾಗಿಸಲು ಬಿಜೆಪಿ ಯತ್ನ: ಜಗದೀಶ್ ಶೆಟ್ಟರ್'ಗೆ ಸ್ಪೀಕರ್ ಸ್ಥಾನ ನೀಡಲು ಚಿಂತನೆ? 

ಬಿಜೆಪಿಯಲ್ಲಿ ನಾಯಕತ್ವ ವಿಚಾರ ಸಂಬಂಧ ಅಸಮಾಧಾನಗಳು ಭುಗಿಲೆದ್ದಿವೆ. ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿಯವರ ಸಂಪುಟದಲ್ಲಿ ಸೇರ್ಪಡೆಗೊಳ್ಳುವುದಿಲ್ಲ ಎಂದು ತಮ್ಮ ಮುನಿಸನ್ನು ಹೊರಹಾಕಿದ್ದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ತಣ್ಣಗಾಗಿಸಲು ಬಿಜೆಪಿ ಯತ್ನ ನಡೆಸುತ್ತಿದ್ದು, ಇದರಂತೆ ಶೆಟ್ಟರ್ ಅವರಿಗೆ ಸ್ಪೀಕರ್ ಸ್ಥಾನ ನೀಡಲು ಚಿಂತನೆ...
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ವಿಚಾರ ಸಂಬಂಧ ಅಸಮಾಧಾನಗಳು ಭುಗಿಲೆದ್ದಿವೆ. ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿಯವರ ಸಂಪುಟದಲ್ಲಿ ಸೇರ್ಪಡೆಗೊಳ್ಳುವುದಿಲ್ಲ ಎಂದು ತಮ್ಮ ಮುನಿಸನ್ನು ಹೊರಹಾಕಿದ್ದ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ತಣ್ಣಗಾಗಿಸಲು ಬಿಜೆಪಿ ಯತ್ನ ನಡೆಸುತ್ತಿದ್ದು, ಇದರಂತೆ ಶೆಟ್ಟರ್ ಅವರಿಗೆ ಸ್ಪೀಕರ್ ಸ್ಥಾನ ನೀಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ಪಕ್ಷದ ವಿಚಾರವೇ ಇರಲಿ, ಸರ್ಕಾರದ ವಿಷಯವೇ ಇರಲಿ ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾದೆ ಸಿಟ್ಟು ಮಾಡಿಕೊಳ್ಳದೆ ಸಹನೆಯಿಂದಲೇ ಹೇಳಿಕೆ ಕೊಡುವ, ಸ್ವಭಾವದವರು ಜಗದೀಶ ಶೆಟ್ಟರ್‌ ಅವರದ್ದಾಗಿದೆ. ಆದರೆ, ನೂತನ ಸಿಎಂ ಅಧಿಕಾರ ವಹಿಸಿಕೊಂಡಿದ್ದೇ ತಡ ಶೆಟ್ಟರ್ ಅವರು ಸಚಿವ ಸ್ಥಾನ ಕುರಿತಾಗಿ ನೀಡಿರುವ ಆಕ್ರೋಶದ ಹೇಳಿಕೆ ಇದೀಗ ಬಿಜೆಪಿಯಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.

ಹೀಗಾಗಿ, ಶೆಟರ್ ಅವರ ಮುನಿಸು ದೂರಾಗುವಂತೆ ಮಾಡಲು ಯತ್ನ ನಡೆಸಲು ಮುಂದಾಗಿರುವ ಬಿಜೆಪಿ, ಪ್ರಸ್ತುತ ಸ್ಪೀಕರ್‌ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ, ಆ ಸ್ಥಾನಕ್ಕೆ ಶೆಟ್ಟರ್ ಅವರನ್ನು ತರಲು ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ಕುರಿತು ಆಪ್ತರೊಂದಿಗೆ ಪ್ರತಿಕ್ರಿಯೆ ನೀಡಿರುವ ಶೆಟರ್ ಅವರು, ಈ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಸಿಲ್ಲ. ಒಂದು ವೇಳೆ ಅಂತಹ ಪ್ರಸ್ತಾಪ ಬಂದರೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಶೆಟ್ಟರ್ ಅವರು, ನಾನು ಯಾವುದೇ ಕಾರಣಕ್ಕೂ ಬಸವರಾಜ್ ಬೊಮ್ಮಾಯಿಯವರ ಸಚಿವ ಸಂಪುಟಕ್ಕೆ ಸೇರುವುದಿಲ್ಲ. ಸಕನಾಗಿಯೇ ನಾನು ಕೆಲಸ ಮುಂದುವರಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದವನು. ಸ್ವಾಭಿಮಾನ ಗೌರವದ ಹಿನ್ನೆಲೆ ಈ ನಿರ್ಧಾರ ಮಾಡಿದ್ದೇನೆ.  ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನಾನು ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಆಗ ಸಚಿವನಾಗಲು ನನಗೆ ಯಾವುದೇ ಮುಜುಗರವಿರಲಿಲ್ಲ. 10 ವರ್ಷ ವಿಪಕ್ಷದ ನಾಯಕನಾಗಿ, ಸ್ಪೀಕರ್ ಆಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮತ್ತು ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ನನಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ನನಗೆ ಪಕ್ಷ ಎಲ್ಲ ರೀತಿಯ ಜವಾಬ್ದಾರಿ ಮತ್ತು ಗೌರವವನ್ನು ಕೊಟ್ಟಿದೆ. ಹೀಗಾಗಿ ನಾನು ಸಂಪುಟ ಸೇರುವುದಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com