ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ 2.5 ಲಕ್ಷ ಕೋಟಿ ರೂ. ನಷ್ಟ: ಸಿದ್ದರಾಮಯ್ಯ

ರಾಜ್ಯದಲ್ಲಿ ಪ್ರವಾಹ, ಅತಿವೃಷ್ಠಿಯಿಂದಾಗಿ 2.5 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ನಾಡಿನ ರೈತರ ಕಷ್ಟ ಹೇಳತೀರದಾಗಿದೆ. ಆದರೆ ಕೇಂದ್ರ ಸರ್ಕಾರ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ವಿರೋಧ ಪಕ್ಷದ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಳಗಾವಿ: ರಾಜ್ಯದಲ್ಲಿ ಪ್ರವಾಹ, ಅತಿವೃಷ್ಠಿಯಿಂದಾಗಿ 2.5 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ನಾಡಿನ ರೈತರ ಕಷ್ಟ ಹೇಳತೀರದಾಗಿದೆ. ಆದರೆ ಕೇಂದ್ರ ಸರ್ಕಾರ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ ನಿಯಮ 60ರಡಿ ನಿಲುವಳಿ ಸೂಚನೆ ಮಂಡಿಸಿ ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿನ ಬೆಳೆಹಾನಿ ಕುರಿತು ಪ್ರಾಸ್ತಾವಿಕವಾಗಿ ಸಿದ್ದರಾಮಯ್ಯ ಮಾತನಾಡಿದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ್ಮೇಲೆ ಪ್ರವಾಹ, ಅತಿವೃಷ್ಠಿ, ಬರಗಾಲ ರಾಜ್ಯವನ್ನು ಕಾಡಿದೆ. ನೂರು ವರ್ಷಗಳಲ್ಲಿ ಕಾಣದಷ್ಟು ಪ್ರವಾಹ 2019ರಲ್ಲಿ ಕಾಣಿಸಿಕೊಂಡಿತು. ಇಂಥದ್ದೊಂದು ಮಳೆ ಅನಾಹುತವನ್ನು ನಾವು ಕಂಡಿರಲಿಲ್ಲ ಎಂದು ಖುದ್ದು ಯಡಿಯೂರಪ್ಪ ಸದನದಲ್ಲಿ ಈ ಹಿಂದೆ ಹೇಳಿದ್ದರು. ಮೇ ತಿಂಗಳಲ್ಲಿ ಚೌಕ್ತಿ ಚಂಡಮಾರುತ, ಜುಲೈ-ಆಗಸ್ಟ್ ನಲ್ಲಿ ಪ್ರವಾಹ, ಅಕ್ಟೋಬರ್ ರಿಂದ ನವೆಂಬರ್ ತಿಂಗಳವರೆಗೆ ಅತಿವೃಷ್ಟಿಯಾಯಿತು. ಇದು ಡಿಸೆಂಬರ್ ತಿಂಗಳ ಮೊದಲ ವಾರದ ವರೆಗೆ ಮುಂದುವರಿಯಿತು ಎಂದರು.

ಸತತ ಮಳೆಯಿಂದಾಗಿ ರಾಜ್ಯದಲ್ಲಿ ಸೂರ್ಯನೇ ಕಾಣಿಸಲಿಲ್ಲ ಎಂದ ಸಿದ್ದರಾಮಯ್ಯ, ಎಂಟಿಬಿ ನಾಗರಾಜ್ ಅವರನ್ನು ಇದೇ ವೇಳೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಂಟಿಬಿ, ಇದು ನೈಸರ್ಗಿಕ ಕ್ರಿಯೆ. ಆದರೆ, ಮಳೆಯಿಂದಾಗಿರುವ ಒಂದೇ ಒಂದು ಅನುಕೂಲ ಅಂದರೆ ನಮ್ಮ ಭಾಗದಲ್ಲಿ ಕೆರೆಗಳು ತುಂಬಿರುವುದು ಎಂದು ತಿಳಿಸಿದರು. 

ಇದನ್ನು ಪ್ರಶ್ನೆ ಮಾಡಿದ ಶರತ್ ಬಚ್ಚೇಗೌಡ, ಹೊಸಕೋಟೆ, ಚಿಕ್ಕಬಳ್ಳಾಪುರ ಭಾಗದಲ್ಲಿ ಕೆರೆ ತುಂಬಿಲ್ಲ. ಸಚಿವ ಎಂಟಿಬಿ ಸದನಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಶರತ್ ಬಚ್ಚೇಗೌಡ ಅವರ ಮಾತಿಗೆ ಚಿಕ್ಕಬಳ್ಳಾಪುರ ಶಾಸಕರು ಧ್ವನಿಗೂಡಿಸಿದರು. ನಂತರ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಈ ಭಾಗದಲ್ಲಿ ಕೆರೆ ತುಂಬಲು ಕಾಂಗ್ರೆಸ್ ಸರ್ಕಾರ ಇದ್ದಾಗ ಕೈಗೊಂಡ ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್ ವ್ಯಾಲಿ ಯೋಜನೆ ಕಾರಣ ಎಂದು ತಿಳಿಸಿದರು.

ಕಳೆದ 60 ವರ್ಷಗಳಲ್ಲಿ ಇಷ್ಟೊಂದು ಮಳೆಯನ್ನು ರಾಜ್ಯ ಕಂಡಿರಲಿಲ್ಲ. ವಾಡಿಕೆಯಂತೆ 166 ಮಿ ಮೀಟರ್ ನಷ್ಟು ಮಳೆಯಾಗಬೇಕಾಗಿತ್ತು. ಆದರೆ, ರಾಜ್ಯದಲ್ಲಿ ಆ ತಿಂಗಳಲ್ಲಿ ಸುರಿದಿದ್ದು ಬರೋಬ್ಬರಿ 307 ಮಿ.ಮೀ ನಷ್ಟು. ಪ್ರಸಕ್ತ ಸಾಲಿನಲ್ಲಿ 78 ಲಕ್ಷ 83 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಇದರಲ್ಲಿ ಸುಮಾರು ಶೇಕಡಾ 75 ರಷ್ಟು ಬೆಳೆ ಹಾನಿಯಾಗಿದೆ. ರಾಗಿ, ಭತ್ತ, ಶೇಂಗಾ, ಮೆಕ್ಕೆಜೋಳ, ಮೆಣಸು, ಕಾಫಿ, ತೊಗರಿ, ಹತ್ತಿ, ಮೆಣಸಿನ ಕಾಯಿ ಟೊಮ್ಯೊಟೋ, ಹೂ ಬೆಳೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ರೈತನಿಗೆ ಹಾನಿಯಾಗಿದೆ ಎಂದು ವಿವರಿಸಿದರು.

ಕೋಲಾರ ಹಾಗೂ ಮೈಸೂರು ಭಾಗದಲ್ಲಿ ಭಾರಿ ಮಳೆಗೆ ಸಿಲುಕಿ ರಾಗಿ ಬೆಳೆ ನೆಲಕ್ಕೆ ಬಿದ್ದು ಮೊಳಕೆ ಒಡೆದಿದೆ.  ಕಾಫಿ ಶೇಕಡಾ 30ರಷ್ಟು ನಷ್ಟ ಕಂಡಿದೆ. ಈ ಬಾರಿ 7 ಲಕ್ಷ ಹೆಕ್ಟೇರ್ ನಲ್ಲಿ ರಾಗಿ ಬೆಳೆಯಲಾಗಿತ್ತು. ಅದರಲ್ಲಿ ಶೇಕಡಾ 75 ರಷ್ಟು ಭಾಗ ಹಾನಿಯಾಗಿದೆ. ಇದರಿಂದ ರೈತರ ಬದುಕು ಚಿತ್ರಾನ್ನ ಆಗಿದೆ. ಯಾವ ಕಾಲದಲ್ಲೂ ಈ ರೀತಿ ಆಗಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.

ನವೆಂಬರ್ ತಿಂಗಳವೊಂದರಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಈ ವರ್ಷ ಬರೋಬ್ಬರಿ 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಸರ್ಕಾರದ ಮಾಹಿತಿಯಂತೆ 11,916 ಕೋಟಿ ನಷ್ಟವಾಗಿದೆ. ರೈತರ ಬದುಕಿನಲ್ಲಿ ಹಾಹಾಕಾರ ಎದ್ದಿದೆ. ಅವರ ಒಂದೇ ಮಾತು ಪರಿಹಾರ ಕೊಡಿಸಿ ಅನ್ನೋದು. ಪರಿಹಾರ ಕೊಡಿಸಿ ಅನ್ನೋದು ಎಲ್ಲ ಭಾಗದ ರೈತರ ಬೇಡಿಕೆಯಾಗಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸದನದ ಗಮನ ಸೆಳೆದರು.

ಬ್ಯಾಂಕುಗಳಿಂದ ಸಾಲ ಮಾಡಿ ರೈತ ಬೆಳೆ ಬೆಳೆದಿದ್ದ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಅತಿವೃಷ್ಟಿ, ಬರಗಾಲ, ಪ್ರವಾಹ ಸಂಭವಿಸಿದ್ರೂ ಕೇಂದ್ರ ಸರ್ಕಾರದಿಂದ ಒಂದು ಪೈಸೆ ಬಂದಿಲ್ಲ. 2013-14ರಲ್ಲಿ ಕೇಂದ್ರ ಸರ್ಕಾರ 16 ಲಕ್ಷ 36 ಸಾವಿರ ಕೋಟಿ ರೂಪಾಯಿ ಬಜೆಟ್ ಮಂಡಿಸಿತ್ತು. ಮೋದಿ ಸರ್ಕಾರದವಧಿಯಲ್ಲಿ 2020-21ರಲ್ಲಿ 34 ಲಕ್ಷ 86 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿದ್ದಾರೆ. ಒಟ್ಟಾರೆ 2013-14ರ ಸಾಲಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಡಬಲ್ ಗಾತ್ರದ ಬಜೆಟ್ ಮಂಡನೆ ಮಾಡುತ್ತಿದೆ. ಅಲ್ಲದೆ, ರಾಜ್ಯದಿಂದ 2013-14ರಲ್ಲಿ ನಾಲ್ಕೈದು ಸಾವಿರ ಕೋಟಿ ರೂಪಾಯಿ ಪೆಟ್ರೋಲ್ ತೆರಿಗೆಯಿಂದ ಸಂಗ್ರಹವಾಗುತ್ತಿತ್ತು. ಈಗ ಅದು 36 ಸಾವಿರ ಕೋಟಿ ರೂಪಾಯಿ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ಅವರ ನಿಲುವಳಿ ಸೂಚನೆ ಪ್ರಸ್ತಾವಿಕ ಭಾಷಣವನ್ನು 69ರಡಿ ನಾಳೆ ಚರ್ಚೆಗೆ ತೆಗೆದುಕೊಳ್ಳುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com