ತಮ್ಮ ನಿಷ್ಠರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸಂಚಲನ ಮೂಡಿಸುತ್ತಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಷ್ಠಾವಂತರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸಂಚಲನ ಮೂಡಿಸುತ್ತಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಷ್ಠಾವಂತರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. 

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಹಿರಿಯ ನಟಿ ಶ್ರುತಿ ಅವರನ್ನು ಬದಲಾಯಿಸಲಾಗಿದ್ದು, ಅವರ ಜಾಗಕ್ಕೆ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಈ ನಡುವೆ ನೂತನವಾಗಿ ರಚನೆ ಮಾಡಲಾದ ಒಕ್ಕಲಿಗ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಶಾಸಕ. ಎಂ.ಕೃಷ್ಣಪ್ಪ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. 

ಕೃಷ್ಣಪ್ಪ ಅವರು ಕಂದಾಯ ಸಚಿವ ಆರ್.ಅಶೋಕ ಅವರ ಸಂಬಂಧಿಯಾಗಿದ್ದು, ಯಡಿಯೂರಪ್ಪರಿಗೂ ನಿಷ್ಟಾವಂತ ವ್ಯಕ್ತಿ ಹಾಗೂ ಕಾಪು ಸಿದ್ದಲಿಂಗಸ್ವಾಮಿಯವರಿಗೂ ಆಪ್ತರಾಗಿದ್ದಾರೆಂದು ಹೇಳಲಾಗುತ್ತಿದೆ. 

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಶೃತಿ ಅವರನ್ನು ಕೈಬಿಟ್ಟು, ಕಾ.ಪು.ಸಿದ್ದಲಿಂಗ ಸ್ವಾಮಿಯವರನ್ನು ನೇಮಕ ಮಾಡಿದ್ದು, ಕೆಲ ಕಾಲ ಅಚ್ಚರಿ ಮೂಡಿಸಿತ್ತು. ತಂದ ನಂತರ ನಟಿ ಶ್ರುತಿಯವರನ್ನು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ಹೊರಬಿದ್ದ, ಹಿನ್ನೆಲೆಯಲ್ಲಿ ಈ ಕುರಿತ ಊಹಾಪೋಹಗಳು ದೂರಾಗುವಂತಾಗಿತ್ತು. 

ಸಿಎಂ ಯಡಿಯೂರಪ್ಪ ಅವರ ದೆಹಲಿ ಭೇಟಿ ಬಳಿಕ ತೆಗೆದುಕೊಂಡಿರುವ ಮೊದಲ ನಿರ್ಧಾರ ಇದಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಈ ನೇಮಕಾತಿಯ ಮೂಲಕ ರಾಜ್ಯದಲ್ಲಿ ನಡೆಯಬಹುದಾದ ಬಹುದೊಡ್ಡ ರಾಜಕೀಯ ಸ್ಥಿತ್ಯಂತರದ ಮುನ್ಸೂಚನೆ ಕೊಟ್ಟಿರಬಹುದಾ? ಎಂಬ ಚರ್ಚೆಗಳು ಆರಂಭವಾಗಿವೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದ್ದು. ಆ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ಅವರು ಅಧಿಕಾರದ ಸ್ಥಾನಗಳನ್ನು ಒದಗಿಸುತ್ತಿದ್ದಾರೆ. ಒಂದೊಮ್ಮೆ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಲ್ಲಿ ತಮ್ಮ ಆಪ್ತರಿಗೆ ಸ್ಥಾನಮಾನ ಕೊಡಿಸಿಯೇ ಹೋಗುತ್ತಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

ತಮ್ಮ ನಿಷ್ಟಾವಂತ ನಾಯಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡುವ ಮೂಲಕ ತಮ್ಮ ವಿರುದ್ಧ ಧ್ವನಿ ಎತ್ತಿರುವ ನಾಯಕರಿಗೂ ಕಠಿಣ ಸಂದೇಶ ರವಾನಿಸಿದ್ದಾರೆ. 

ಈ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿತ್ತು ಎಂದು ಬಿಜೆಪಿ ಮೂಲಗಳು ಹೇಳಿವೆ. ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಯಡಿಯೂರಪ್ಪ ಅವರು ತೀವ್ರ ಬೇಸರಗೊಂಡಿದ್ದು, ನಿಗಮ ಮಂಡಳಿ ಅಧ್ಯಕ್ಷ ನೇಮಕಾತಿ ಮೂಲಕ ಬಂಡಾಯ ಶಾಸಕರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ತಮ್ಮೊಂದಿಗೆ ಪ್ರಾಮಾಣಿಕರಾಗಿರುವ ವ್ಯಕ್ತಿಯನ್ನು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಯೋಗೇಶ್ವರ್ ಅವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆಂದು ತಿಳಿಸಿದೆ. 

ಸರಿಯಾಗಿ ಕೆಲಸ ಮಾಡದಿರುವ ಹಾಲಿ ನಿಗಮ-ಮಂಡಳಿ, ಪ್ರಾಧಿಕಾರಗಳಿಗೆ ನೇಮಕಾತಿ ಮಾಡಿರುವವರನ್ನು ವಜಾ ಮಾಡಬೇಕು. ಉಳಿದ 2 ವರ್ಷಗಳ ಅವಧಿಗೆ ಪಕ್ಷದ ಬೇರೆ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಒಂದು ಪಟ್ಟಿಯನ್ನೂ ಮಾಡಬೇಕು ಸಿದ್ಧಪಡಿಸಬೇಕು ಎಂಬ ಚರ್ಚೆ ಕಳೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಡೆದಿತ್ತು. ಪಟ್ಟಿಯನ್ನು ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿದ್ಧಪಡಿಸಿದ್ದರು. ಆದರೆ, ಈ ಪಟ್ಟಿ ಸಮಿತಿಯ ಮುಂದೆ ಇಡುವುದಕ್ಕೂ ಮುನ್ನವೇ ಸಿಎಂ ಯಡಿಯೂರಪ್ಪ ಈ ಬದಲಾವಣೆಯನ್ನು ಮಾಡಿದ್ದಾರೆಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com