'ಪೆಟ್ರೋಲ್ ಬೆಲೆ ಹೀಗೆ ಏರಿಕೆಯಾದರೆ ಜನಸಾಮಾನ್ಯರು ಬದುಕುವುದು ಹೇಗೆ?': ಸಿದ್ದರಾಮಯ್ಯ ಪ್ರಶ್ನೆ; ಕಾಂಗ್ರೆಸ್ ಪ್ರತಿಭಟನೆ 

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪೆಟ್ರೋಲ್ ಬಂಕ್ ಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು ಅದರ ಭಾಗವಾಗಿ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸುತ್ತಿರುವುದು
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸುತ್ತಿರುವುದು

ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪೆಟ್ರೋಲ್ ಬಂಕ್ ಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು ಅದರ ಭಾಗವಾಗಿ ರಾಜ್ಯದಲ್ಲಿ ಕೂಡ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಆರಂಭಿಸಿರುವ ಪ್ರತಿಭಟನೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮೊದಲಾದವರು ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇದು ಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೋನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ, ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ದರ ಈ ರೀತಿ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಲಿ, ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ, ಪೆಟ್ರೋಲ್,ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಳವಾಗುತ್ತದೆ, ದೇಶ ಹಾಳು ಮಾಡಬೇಡಿ ಎಂದು ಪ್ರಧಾನಿ ಮೋದಿಯವರನ್ನು ನೇರವಾಗಿ ಉದ್ದೇಶಿಸಿ ಹೇಳಿದರು.

ದೇಶದಲ್ಲಿ ಬಿಜೆಪಿ ಸರ್ಕಾರ ನರಕ ಸೃಷ್ಟಿಸುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ನರೇಂದ್ರ ಮೋದಿ ಅಧಿಕಾರ ಮಾಡುತ್ತಿದ್ದಾರೆ. ಮೋದಿ ಈ ದೇಶದ ಜನರ ರಕ್ತ ಹೀರುತ್ತಿದ್ದಾರೆ. ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುತ್ತಿದ್ದಾರೆ. ತಿಗಣೆಯಂತೆ ಜನರ ರಕ್ತ ಹೀರುತ್ತಿರುವ ಮೋದಿಗೆ ನಾಚಿಕೆ ಆಗುವುದಿಲ್ಲವಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಮನಮೋಹನ್ ಸರ್ಕಾರದದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅವರು ಹಾಹಾಕಾರ ಸೃಷ್ಟಿ ಮಾಡಿದ್ದರು. ನರೇಂದ್ರ ಮೋದಿ ಅವರು ಪ್ರತಿಭಟನೆ ಮಾಡಿದ್ದರು. ಜನರಿಗೆ ಸುಳ್ಳು ಭರವಸೆ ನೀಡಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರು. ಅಚ್ಛೇ ದಿನ್ ಆಯೇಂಗೆ ಎಂದು ಹೇಳಿದ್ದರು. ಇವತ್ತು ನರಕದ ದಿನಗಳ ಬಂದಿವೆ. ನಾವು ನರಕ ನೋಡಿರಲಿಲ್ಲ. ಆದರೆ, ಇದೀಗ ನರಕದ ದಿನಗಳನ್ನು ನೋಡುತ್ತಿದ್ದೇವೆ. ಈಗ ಕೋವಿಡ್ ಸಂಕಷ್ವವಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಜನ ಸಾಮಾನ್ಯರು ಜೀವನ ನಡೆಸುವುದು ಹೇಗೆ? ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, 2021ರಲ್ಲಿ ಈವರೆಗೆ ಕೇಂದ್ರ ಸರ್ಕಾರ 48 ಬಾರಿ ಪೆಟ್ರೋಲ್ ಬೆಲೆ ಏರಿಸಿದೆ. ಅಗತ್ಯ ವಸ್ತುಗಳ, ಇಂಧನ ಬೆಲೆ ಏರಿಕೆಯಾಗಿದೆ ಹೊರತು ಜನಸಾಮಾನ್ಯರ ಆದಾಯ ಏರಿಕೆಯಾಗಿಲ್ಲ, ಕೊರೋನಾದಿಂದಾಗಿ ಮತ್ತಷ್ಟು ಕಡಿಮೆಯಾಗಿದೆ. ಬಡವರ ಕನಿಷ್ಠ ವೇತನವನ್ನು ಸಹ ಏರಿಕೆ ಮಾಡಿಲ್ಲ, ಹೀಗಿರುವಾಗ ಸರ್ಕಾರದ ಕ್ರಮ ಎಷ್ಟು ಸರಿ, ಇದು ಬಿಜೆಪಿ ಸರ್ಕಾರದ ಹಗಲು ದರೋಡೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನೆ ನಡೆಸುತ್ತಿದ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆಯಲು ಮುಂದಾದ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬಳಿಕ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ಕೆಎಸ್ಆರ್​ಪಿ ಬಸ್ ನಲ್ಲಿ ಕರೆದುಕೊಂಡು ಹೋದರು. ರಾಜ್ಯದಲ್ಲಿ ಸೆಕ್ಷನ್ 144 ಜಾರಿ ಇದ್ದರೂ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು. ನಂತರ ಮುಚ್ಚಳಿಕೆ ಹಾಗೂ ವೈಯಕ್ತಿಕ ಮಾಹಿತಿ ಪಡೆದು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com