ಮುಂದಿನ ಸಿಎಂ ಆಗುತ್ತೇವೆ ಎಂದು ಹೊಸ ಬಟ್ಟೆ ಹೊಲಿಸಿದ್ದರೆ ಅದರ‌ ಆಸೆ ಬಿಡಲಿ: ಎಸ್.ಆರ್. ವಿಶ್ವನಾಥ್

ನಮ್ಮ ಪಕ್ಷದ ನಾಯಕರಲ್ಲಿ ಯಾರಾದರೂ ಮುಂದಿನ ಸಿಎಂ ಆಗುತ್ತೇವೆ ಎಂದು ಹೊಸ ಬಟ್ಟೆ ಹೊಲಿಸಿದ್ದರೆ ಅದರ‌ ಆಸೆ ಬಿಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾರ್ಮಿಕವಾಗಿ ನುಡಿದಿದ್ದಾರೆ.
ಎಸ್ ಆರ್ ವಿಶ್ವನಾಥ್
ಎಸ್ ಆರ್ ವಿಶ್ವನಾಥ್

ಬೆಂಗಳೂರು: ನಮ್ಮ ಪಕ್ಷದ ನಾಯಕರಲ್ಲಿ ಯಾರಾದರೂ ಮುಂದಿನ ಸಿಎಂ ಆಗುತ್ತೇವೆ ಎಂದು ಹೊಸ ಬಟ್ಟೆ ಹೊಲಿಸಿದ್ದರೆ ಅದರ‌ ಆಸೆ ಬಿಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾರ್ಮಿಕವಾಗಿ ನುಡಿದಿದ್ದಾರೆ.

ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್.ವಿಶ್ವನಾಥ್, ಇನ್ನೂ ಎರಡು ವರ್ಷ ಯಡಿಯೂರಪ್ಪ‌ರೇ ಮುಖ್ಯಮಂತ್ರಿ ಹುದ್ದೆಯಲ್ಲಿರುತ್ತಾರೆ. ಮುಂದಿನ ಸಾರ್ವತ್ರಿಕ ವಿಧಾನ ಚುನಾವಣೆಯೂ ಯಡಿಯೂರಪ್ಪ ನೇತೃತ್ವದಲ್ಲಿಯೇ ನಡೆಯುತ್ತದೆ. ಯಡಿಯೂರಪ್ಪನವರು  ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಮುಂದಿನ ಚುನಾವಣೆವರೆಗೂ ಅವರೇ ಇರಲಿದ್ದು, ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿಯವರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು, 'ಅಧಿಕಾರ ಗಗನಕುಸುಮವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ  ತಿರುಕನ ಕನಸು ಕಾಣುತ್ತಿದ್ದಾರೆ. ಬಹುಶಃ 60 ರಿಂದ 70 ಪಂಚೆಗಳನ್ನು ಖರೀದಿಸಿರಬಹುದು. ಆದರೆ, ಸಿದ್ದರಾಮಯ್ಯನವರನ್ನು ಪ್ರತಿಪಕ್ಷದ ನಾಯಕನ ಸ್ಥಾನದಿಂದ ಕಿತ್ತೊಗೆಯಲು ಕಾಂಗ್ರೆಸ್ ನಾಯಕರೇ ಪಣ ತೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

'ಕೆಲವರು ದೆಹಲಿಗೆ ಹೋದ ತಕ್ಷಣ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅರ್ಥೈಸಿಕೊಳ್ಳುವ ಅಗತ್ಯವಿಲ್ಲ. ಕೆಲವರು ಇಂತಹ ಗಾಳಿ ಸುದ್ದಿಗಳನ್ನು ಹರಡಲೆಂದೇ ಇರುತ್ತಾರೆ. ಇಂತಹವರಿಗೆ ಭ್ರಮನಿರಸನವಾಗಲಿದೆ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದು ಯಾವುದೇ ಶಾಸಕರು ಆಗ್ರಹ ಮಾಡಿಲ್ಲ. ಅಲ್ಲದೇ,  ನಮ್ಮ ಪಕ್ಷದ ಯಾವುದೇ ನಾಯಕರಾರೂ ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೊಸ ಬಟ್ಟೆ ಹೊಲಿಸಿಲ್ಲ ಎಂದು ವ್ಯಂಗ್ಯ ಮಾಡಿದರು.

ಜನರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್ ನಾಯಕರು
ಇಡೀ ದೇಶ ಕೊರೊನಾದಿಂದ ತತ್ತರಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಪಕ್ಷಕ್ಕೆ ಸಂಬಂಧವಿಲ್ಲದ ವಿಚಾರಗಳನ್ನು ಪ್ರಸ್ತಾಪ ಮಾಡಿ ಒಣ ರಾಜಕೀಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಲಹೆ  ಮಾಡಿದ್ದರೆ ಇದೇ ಕಾಂಗ್ರೆಸ್ ನಾಯಕರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ಹಾದಿ ತಪ್ಪಿಸಿದರು. ಆದರೆ, ಲಸಿಕೆಯು ಜೀವ ಉಳಿಸುತ್ತದೆ ಎಂದು ತಿಳಿದ ಮೇಲೆ ಏಪ್ರಿಲ್ ನಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಇನ್ನಿತರೆ ನಾಯಕರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಬಗ್ಗೆ ಮೊದಲೇ ಸರ್ಕಾರದ ಜತೆ  ಸೇರಿ ಜನ ಜಾಗೃತಿ ಮೂಡಿಸಿದ್ದರೆ ಜನರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತಿತ್ತು. ಆದರೆ, ನಾಯಕರ ಇಬ್ಬಗೆಯ ಧೋರಣೆ ಜನರಿಗೆ ಗೊತ್ತಾಗಿದ್ದು, ನಗೆಪಾಟಿಲಿಗೆ ಈಡಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೆ ಸಿದ್ದರಾಮಯ್ಯ ಮತ್ತವರ ಪಕ್ಷ  ಚುನಾವಣೆಯಲ್ಲಿ ಏಕೆ ಸೋಲನುಭವಿಸಬೇಕಿತ್ತು. ಸದಾ ಆಂತರಿಕ ಕಚ್ಚಾಟದಲ್ಲೇ ತೊಡಗಿರುವ ಆ ಪಕ್ಷದ ಮುಖಂಡರೆನಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಕವಡೆ ಕಿಮ್ಮತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com