ಆಡಳಿತದಲ್ಲಿ ಹಸ್ತಕ್ಷೇಪ ಆರೋಪ ರಾಜಕೀಯ ಪ್ರೇರಿತ: ಬಿ.ವೈ. ವಿಜಯೇಂದ್ರ

ಆಡಳಿತದಲ್ಲಿ ತಮ್ಮ ಹಸ್ತಕ್ಷೇಪದ ಬಗ್ಗೆ ಪಕ್ಷದ ಕೆಲ ಮುಖಂಡರಿಂದ ಪದೇ ಪದೇ ಕೇಳಿಬರುತ್ತಿರುವ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ

ಬೆಂಗಳೂರು: ಆಡಳಿತದಲ್ಲಿ ತಮ್ಮ ಹಸ್ತಕ್ಷೇಪದ ಬಗ್ಗೆ ಪಕ್ಷದ ಕೆಲ ಮುಖಂಡರಿಂದ ಪದೇ ಪದೇ ಕೇಳಿಬರುತ್ತಿರುವ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ. ಯಾವುದೇ ಮಂತ್ರಿಗಳು ತಮ್ಮ ಹಸ್ತಕ್ಷೇಪದ ಆರೋಪ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

30-40 ವರ್ಷಗಳ ಕಾಲ ರಾಜಕೀಯ ಹೋರಾಟ ಮತ್ತು ಲಕ್ಷಾಂತರ ಪಕ್ಷದ ಕಾರ್ಯಕರ್ತರ ಪ್ರಯತ್ನದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ.ಶಾಸಕ, ಪ್ರತಿಪಕ್ಷದ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅವರ ರಾಜ್ಯದ ಸೇವೆ ಮಾಡಿದ್ದು, ಆಡಳಿತವನ್ನು ಹೇಗೆ ನಡೆಸಬೇಕೆಂದು ಅವರಿಗೆ ಗೊತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ನನ್ನ ಜವಾಬ್ದಾರಿ ನನಗೆ ಗೊತ್ತಿದೆ. ನನ್ನ ಸ್ವಂತ ಹಾದಿಯಲ್ಲಿ ರಾಜ್ಯಕ್ಕೆ ಸೇವೆ ಮಾಡುತ್ತೇನೆ. ಬಿಜೆಪಿ ಉಪಾಧ್ಯಕ್ಷನಾಗಿ ನನ್ನ ಕಾರ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಪದೇ ಪದೇ ಏಕೆ ಹಸ್ತಕ್ಷೇಪದ ಆರೋಪಗಳು ಬರುತ್ತಿವೆ ಎಂಬ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ವಿಜಯೇಂದ್ರ, ಅನೇಕ ಜನರು ನನ್ನ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದಾರೆ. ಪ್ರೀತಿ ಹೆಚ್ಚಾದಾಗ, ಅವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ. ಯೋಗೇಶ್ವರ್ ಅವರ ಶೀತಲ ಸಮರ ಕುರಿತಂತೆ ವಿಜಯೇಂದ್ರ ಹೇಳಿದರು.

ನಾನು ಸಚಿವ. ನನ್ನ ಅಧಿಕಾರನ್ನು ನನ್ನ ಮಗ ಚಲಾಯಿಸುವುದನ್ನು ನಾನು ಒಪ್ಪಿಕೊಳ್ಳಲ್ಲ. ಅದೇ ರೀತಿ, ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಬೇರೊಬ್ಬರು ಅಧಿಕಾರವನ್ನು ಚಲಾಯಿಸುವುದು ಅಥವಾ ನನ್ನ ಹೆಸರಿನಲ್ಲಿ ಪ್ರದರ್ಶನ ತೋರುವುದು ನನ್ನೊಂದಿಗೆ ವೈಯಕ್ತಿಕವಾಗಿ ಕುಳಿತುಕೊಳ್ಳುವುದು ಸರಿಯಾಗಿರಲಿಲ್ಲ ಎಂದು ಸಿ.ಪಿ. ಯೋಗೇಶ್ವರ್ ಗುರುವಾರ ಹೇಳಿದ್ದರು.

ಹಿರಿಯ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಕುರಿತಂತೆ ಆರಂಭದಿಂದಲೂ ಆಕ್ಷೇಪಿಸುತ್ತಲೇ ಬಂದಿದ್ದಾರೆ. ಇದು ಕೂಡಾ ಪಕ್ಷದೊಳಗೆ ಯಡಿಯೂರಪ್ಪ ವಿರುದ್ಧ ಅಸಮಾಧಾನ ಭುಗಿಲೆಳುವಲ್ಲಿ ಪ್ರಮುಖ ಕಾರಣವಾಗಿದೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನವಾಗಿ ಯೋಗೇಶ್ವರ್ ಇತ್ತೀಚಿಗೆ ದೆಹಲಿಗೆ ಹೋಗಿದ್ದರು ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಯೋಗೇಶ್ವರ್, ರಾಜ್ಯದಲ್ಲಿ ನಾಯಕತ್ವದ ಬದಲಾವಣೆಗಾಗಿ ದೆಹಲಿಗೆ ಹೋಗಿರಲಿಲ್ಲ. ಸರ್ಕಾರ ಸಂಪೂರ್ಣವಾಗಿ ಬಿಜೆಪಿ ಸರ್ಕಾರವಾಗಿ ಉಳಿದಿಲ್ಲ. ಕಾಂಗ್ರೆಸ್ , ಜೆಡಿಎಸ್ , ಬಿಜೆಪಿ ಸರ್ಕಾರವಾಗಿ ಹೊರಹೊಮ್ಮಿದ್ದು, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ್ದರು.

ಯೋಗೇಶ್ವರ್ ಹೇಳಿಕೆ ಕುರಿತಂತೆ ಅನೇಕ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಅವರೇ ನಾಯಕರಾಗಿ ಮುಂದುವರೆಯಲಿದ್ದಾರೆ. ಇದು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಮೂರು ಪಕ್ಷಗಳ ಸರ್ಕಾರವಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಒಂದು ವೇಳೆ ಯೋಗೇಶ್ವರ್ ಅವರಿಗೆ ಇಷ್ಟವಿಲ್ಲದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಲಿ, ಪ್ರತಿಯೊಬ್ಬರು ಕೋವಿಡ್ ನಿಯಂತ್ರಣದತ್ತ ಕೆಲಸ ಮಾಡುವಾಗ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಬಾರದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಬಹಿರಂಗ ಅಸಮಾಧಾನ ಕುರಿತ ಯೋಗೇಶ್ವರ್ ಅವರಿಂದ ವಿವರಣೆ ಕೇಳಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com