ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು
ಬಿಜೆಪಿಯಲ್ಲಿ ಸಮರ್ಥನಾಯಕರಿಲ್ಲ.. ಹೀಗಾಗಿ ನಾಯಕತ್ವ ಬದಲಾವಣೆ ಮಾಡಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ ಎಂದು ಹೇಳಿದೆ.
Published: 30th May 2021 08:07 AM | Last Updated: 30th May 2021 08:07 AM | A+A A-

ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಬಿಜೆಪಿಯಲ್ಲಿ ಸಮರ್ಥನಾಯಕರಿಲ್ಲ.. ಹೀಗಾಗಿ ನಾಯಕತ್ವ ಬದಲಾವಣೆ ಮಾಡಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಸಮರ್ಥರು ಎಂದು ಹೇಳಿಕೊಂಡವರಲ್ಲೇ ಬಡಿದಾಟವಾಗುತ್ತಿದೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ಮಾಡಿದ್ದಾರೆ. 'ಸಮರ್ಥರು ಎಂದು ಹೇಳಿಕೊಂಡು ಅವರಲ್ಲೆ ಬಡಿದಾಟವಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಆದ್ಯತೆ ಕೋವಿಡ್ ನಿವಾರಣೆ , ದೇಶದ ಆರ್ಥಿಕತೆ ಕಡೆಗೆ ಮಾತ್ರ ಎಂದು ಅವರು ಹೇಳಿದರು.
ಹುಬ್ಬಳ್ಳಿಯಲ್ಲಿದ್ದಾಗ ದೆಹಲಿಯಲ್ಲಿದ್ದಾಗ ಸಚಿವರು ಭೇಟಿಯಾಗುತ್ತಾರೆ. ಆದರೆ ರಾಜ್ಯ ರಾಜಕೀಯದ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ದೆಹಲಿಗೆ ಮೊನ್ನೆ ಕೆಲವರು ಬಂದಿದ್ದರು. ಆದರೆ ದೆಹಲಿಯಲ್ಲಿ ನನ್ನನ್ನು ಯಾರೂ ಭೇಟಿಯಾಗಿಲ್ಲ. ಅವರು ಎಲ್ಲಿ ಹೋದ್ರು, ಯಾರನ್ನ ಭೇಟಿಯಾಗಿದ್ದರೋ ಗೊತ್ತಿಲ್ಲ ಎಂದು ಹೇಳಿದರು.
ಅಂತೆಯೇ ವಯಸ್ಸಿನ ಕಾರಣಕ್ಕಾಗಿ ಯಡಿಯೂರಪ್ಪರವರನ್ನು ಹುದ್ದೆಯಿಂದ ಇಳಿಸಬೇಕೆಂಬ ಒತ್ತಡ ಸರಿಯಲ್ಲ ಎಂದೂ ಜೋಶಿ ಅಭಿಪ್ರಾಯಪಟ್ಟರು.