ಬಿಟ್ ಕಾಯಿನ್ ಹಗರಣ: ಹರಿಹಾಯುತ್ತಿರುವ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಬಿಜೆಪಿ!
ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಪ್ರತೀಯೊಂದು ವೇದಿಕೆಯಲ್ಲಿಯೂ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ.
Published: 16th November 2021 12:15 PM | Last Updated: 16th November 2021 12:15 PM | A+A A-

ಆರ್.ಅಶೋಕ್
ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸೇರಿದಂತೆ ಪ್ರತೀಯೊಂದು ವೇದಿಕೆಯಲ್ಲಿಯೂ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ತಿರುಗಿಬಿದ್ದಿದೆ.
ದೆಹಲಿ ನಾಯಕರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಹಗರಣ ಕುರಿತ ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಒಂದರ ಹಿಂದೆ ಒಂದರಂತೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ಪಕ್ಷದ ನಾಯಕರು 8 ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಪತ್ರಿಕಾಗೋಷ್ಠಿ ಸೋಮವಾರ ಕೂಡ ಮುಂದುವರೆದಿದ್ದವು. ನಿನ್ನೆ ಕೂಡ ಕಂದಾಯ ಸಚಿವ ಆರ್.ಅಶೋಕ್, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತು ಇತರೆ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದರು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳಿನ ಸರದಾರರಾಗಿದ್ದಾರೆ. ಬುಟ್ಟಿಯಲ್ಲಿ ಹಾವಿದೆ ತೋರಿಸುತ್ತೇವೆ ಎನ್ನುತ್ತಿದ್ದಾರೆಯೇ ಹೊರತು ಹಾವು ತೋರಿಸುತ್ತಿಲ್ಲ. ಹಾವೇ ಇಲ್ಲದ ಬುಟ್ಟಿ ಇಟ್ಟುಕೊಂಡಿದ್ದಾರೆಂದು ಸವಾಲು ಹಾಕಿದರು.
ಕಾಂಗ್ರೆಸ್ ನಾಯಕರ ಬುಟ್ಟಿಯಲ್ಲಿ ನಾಗರಹಾವು ಇದೆಯಾ, ಹೆಬ್ಬಾವು, ಕೆರೆಹಾವು, ಮಂಡಲದ ಹಾವು ಇದೆಯಾ ಎಂಬುದನ್ನು ತೋರಿಸಬೇಕು. ಹಳ್ಳಿಕಡೆಯಲ್ಲಿ ನಾಟಕ ಮಾಡುವವರು ಕೊನೆಗೆ ಬುಟ್ಟಿಯಲ್ಲಿದ್ದ ಹಾವು ತೋರಿಸುತ್ತಾರೆ. ಆದರೆ ಕಾಂಗ್ರೆಸ್ ನವರು ಖಾಲಿ ಬುಟ್ಟಿ ಇಟ್ಟುಕೊಂಡು ಹಾವು ತೋರಿಸುತ್ತೇನೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಿಜೆಪಿಯವರು ಕಮಿಷನ್ ಪಡೆದಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ, ವಿಚಾರಣೆಯಲ್ಲಿ ಕಾಂಗ್ರೆಸ್ ನವರೇ ಕಮಿಷನ್ ಪಡೆದಿದ್ದಾರೆಂಬುದು ಸಾಬೀತಾಗಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ನಾಯಕರು ಇದ್ದಾರೆಂದು ಆಪಾದಿಸುವ ಸಿದ್ದರಾಮಯ್ಯ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಒಂದೇ ಗಂಟಯಲ್ಲಿ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.