ವಿಧಾನ ಪರಿಷತ್ ಚುನಾವಣೆಯಲ್ಲಿ 15 ಸೀಟು ಗೆಲ್ಲುವ ವಿಶ್ವಾಸವಿದೆ, ಜೆಡಿಎಸ್ ಬೆಂಬಲ ಕೇಳಿದ್ದೇನೆ: ಬಿ ಎಸ್ ಯಡಿಯೂರಪ್ಪ
ಡಿಸೆಂಬರ್ 10ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಪ್ರಚಾರ ತೀವ್ರವಾಗಿದೆ.
Published: 27th November 2021 01:32 PM | Last Updated: 27th November 2021 02:10 PM | A+A A-

ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಡಿಸೆಂಬರ್ 10ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಪ್ರಚಾರ ತೀವ್ರವಾಗಿದೆ.
ಈ ಮಧ್ಯೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ನಾವು 25ರಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, 15 ಕ್ಷೇತ್ರಗಳಲ್ಲಿ ಗೆದ್ದರೆ ವಿಧಾನ ಪರಿಷತ್ ನಲ್ಲಿ ಬಹುಮತ ಸಿಗುತ್ತದೆ. ಯಾರ ಮೇಲೂ ಅವಲಂಬಿತರಾಗುವ ಅಗತ್ಯವಿಲ್ಲ. ಬಿಜೆಪಿ 15 ಸೀಟುಗಳನ್ನು ಗೆಲ್ಲುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಚುನಾವಣೆ ವೇಳೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜ್ವರ ಶುರು: ಕುಮಾರಸ್ವಾಮಿ ಲೇವಡಿ
ಈ ಹಿನ್ನೆಲೆಯಲ್ಲಿ ನಾನು ಶಿವಮೊಗ್ಗ ಪ್ರವಾಸ ಕೈಗೊಳ್ಳುತ್ತಿದ್ದು, ನಾಳೆ ಸಾಗರ, ಸೊರಬ ತಾಲ್ಲೂಕುಗಳಿಗೆ ಭೇಟಿ ನೀಡಲಿದ್ದು ನಾಡಿದ್ದು ಹೊನ್ನಾಳಿಗೆ ಭೇಟಿ ನೀಡುತ್ತೇನೆ, ನಮ್ಮ ಅಭ್ಯರ್ಥಿ ಡಿ ಎಸ್ ಅರುಣ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮ ಗುರಿಯಾಗಿದೆ ಎಂದರು.
ಜೆಡಿಎಸ್ ಬೆಂಬಲ ಕೇಳಿದ್ದೇನೆ: ಎಲ್ಲಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿಲ್ಲವೋ ಅಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಜೆಡಿಎಸ್ ನಾಯಕರನ್ನು ಕೇಳಿದ್ದೇನೆ, ಜೆಡಿಎಸ್ ಅಭ್ಯರ್ಥಿಗಳು ಇಲ್ಲದಿರುವ ಕಡೆ ಬಹುಪಾಲು ಸಹಕಾರ ಕೊಡಬಹುದು, ಇಂದು ಅಥವಾ ನಾಳೆ ಈ ಬಗ್ಗೆ ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಬಹುದು ಎಂದರು.