ಬೆಳಗಾವಿ ಚುನಾವಣೆಯಲ್ಲಿ ಅಕ್ರಮ ಸಾಧ್ಯತೆ: ಭದ್ರತೆ ಹೆಚ್ಚಿಸುವಂತೆ ಆಯೋಗಕ್ಕೆ ಕಾಂಗ್ರೆಸ್ ಮನವಿ
ಬೆಳಗಾವಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆಗಳಿದ್ದು, ಭದ್ರತೆ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಸೋಮವಾರ ಮನವಿ ಮಾಡಿಕೊಂಡಿದೆ.
Published: 30th November 2021 08:40 AM | Last Updated: 30th November 2021 01:43 PM | A+A A-

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಳಗಾವಿ: ಬೆಳಗಾವಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆಗಳಿದ್ದು, ಭದ್ರತೆ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಸೋಮವಾರ ಮನವಿ ಮಾಡಿಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಕ್ಷೇತ್ರದಲ್ಲಿ ಪ್ರತ್ಯೇಕ ಪೊಲೀಸ್ ತಂಡವನ್ನು ನಿಯೋಜಿಸುವಂತೆ ಹಾಗೂ ಗೋಕಾಕ, ರಾಯಬಾಗ, ಅರಭಾವಿ ಹಾಗೂ ಸುತ್ತಮುತ್ತಲಿನ ಮತಗಟ್ಟೆಗಳಲ್ಲಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸುವಂತೆ ಚುನಾವಣಾ ಆಯೋಗ ಹಾಗೂ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಬೆಳಗಾವಿಯ ಹಲವಾರು ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಗೋಕಾಕ್, ಅರಭಾವಿ, ರಾಯಬಾಗ ಮತ್ತಿತರ ಪ್ರದೇಶಗಳಲ್ಲಿ ನಿಜವಾದ ಮತದಾರರನ್ನು ಹೊರತುಪಡಿಸಿ ಇತರರು ಮತ ಚಲಾಯಿಸಿದ್ದಾರೆ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಬೆಳಗಾವಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು.
ಮತದಾರರು ತಮ್ಮ ಒಂದು ಮತವನ್ನು ಬಿಜೆಪಿಗೆ ನೀಡಬೇಕು ಮತ್ತು ಇನ್ನೊಂದು ಮತವನ್ನು ಕಾಂಗ್ರೆಸ್‌ಗೆ ನೀಡಬಾರದು ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇತ್ತೀಚೆಗೆ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮೊದಲ ಪ್ರಾಶಸ್ತ್ಯದ ಮತ ಬಿಜೆಪಿಗೆ, ಎರಡನೇ ಮತ ಕಾಂಗ್ರೆಸ್ ಗೆ ಹಾಕಬೇಡಿ: ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಮರ್ಮವೇನು?
ಬಿಜೆಪಿ ಬ್ಲ್ಯಾಕ್‌ಮೇಲರ್‌ಗಳನ್ನು ಬೆಂಬಲಿಸುವ ಮೂಲಕ ಸರ್ಕಾರವನ್ನು ನಡೆಸುತ್ತಿದೆ. ಬ್ಲಾಕ್ ಮೇಲ್ ಮಾಡುವಲ್ಲಿ ತೊಡಗಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆ ಪಕ್ಷ ವಿಫಲವಾಗಿದೆ. ಕಾಂಗ್ರೆಸ್‌ನಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿದ್ದರೆ ಪಕ್ಷದ ಮುಖ್ಯಸ್ಥನಾಗಿ ನಮ್ಮ ಪಕ್ಷದಲ್ಲಿರುವ ಇಂತಹ ವ್ಯಕ್ತಿಗಳನ್ನು ಹೊರಹಾಕುತ್ತಿದ್ದೆ ಎಂದು ತಿಳಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಉದ್ದೇಶಿಸಿ ರಮೇಶ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ನಾಯಕರ ಇಂತಹ ಭಾಷೆ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಬಿಜೆಪಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಮಹಿಳಾ ನಾಯಕಿಯರಿದ್ದಾರೆ ಮತ್ತು ಅವರು ಬಿಜೆಪಿ ಸುಸಂಸ್ಕೃತ ಪಕ್ಷ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉತ್ತರ ಕೊಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ದೇಶದಲ್ಲಿ ಪಂಚಾಯತಿ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಕಾಂಗ್ರೆಸ್‌ನ ಪಾತ್ರದ ಕುರಿತು ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕಾಂಗ್ರೆಸ್ ಬಲಪಡಿಸುವ ಕೆಲಸ ಮಾಡಿದೆ ಎಂದರು.
ನಾಗರಿಕರು ಮತ್ತು ರೈತರ ಪ್ರತಿಭಟನೆಗೆ ಹೆದರಿ ಬಿಜೆಪಿ ಸರ್ಕಾರ ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲಿಲ್ಲ. ಇದೀಗ ಅಧಿವೇಶನ ನಡೆಸಲು ಒಪ್ಪಿದ್ದಾರೆ ಎಂದು ಗುಡುಗಿದರು.