ಹಾನಗಲ್ ಉಪಚುನಾವಣೆ: 13 ಅಭ್ಯರ್ಥಿಗಳು ಕಣದಲ್ಲಿ
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಬುಧವಾರ ನಾಲ್ಕು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ.
Published: 14th October 2021 09:16 AM | Last Updated: 14th October 2021 09:16 AM | A+A A-

ಹಾನಗಲ್ ನಲ್ಲಿ ಪ್ರಚಾರ ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ.
ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಬುಧವಾರ ನಾಲ್ಕು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ.
ಮುಖ್ಯವಾಗಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಿವೃತ್ತ ಅಧಿಕಾರಿ ಮತ್ತು ಪಂಚಮಸಾಲಿ ಸಮಾಜದ ಮುಖಂಡ ಚನ್ನಪ್ಪ ಬಳ್ಳಾರಿ ತಮ್ಮ ನಾಪತ್ರಗಳನ್ನು ವಾಪಸ್ ಪಡೆದಿದ್ದು, ಬಿಜೆಪಿ ಅಭ್ಯರ್ಥಿಗೆ ನಿರಾಳ ತಂದಿದೆ.
29 ಅಭ್ಯರ್ಥಿಗಳು ಚುನಾವಣೆಗೆ ಈ ಹಿಂದೆ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 12 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ನಿನ್ನೆ ನಾಲ್ವರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಇದರೊಂದಿಗೆ ಉಪಚುನಾವಣೆಯ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ನಿಂತುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿ, ಪಕ್ಷವು ಮಾಜಿ ಶಾಸಕ ಮನೋಹರ್ ತಹಶೀಲ್ದಾರರಿಗೆ ಟಿಕೆಟ್ ನೀಡದಿರುವುದು ಹಾಗೂ ನೆರೆಯ ಜಿಲ್ಲೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಪಕ್ಷದ ಕಾರ್ಯಕರ್ತರು ಅಸಮಾಧಾನಗೊಳ್ಳುವಂತೆ ಮಾಡಿದೆ. ಆದರೆ, ಇದೀಗ ಅವರ ಮನವೊಲಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದು, ಇದೀಗ ಪಕ್ಷದ ಅಭ್ಯರ್ಥಿ ಶ್ರೀನಿವಾಸ ವಿ ಮಾನೆ ಪರವಾಗಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ.
ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ) ಅಂತಿಮ ಕಣದಲ್ಲಿರುವವರಾಗಿದ್ದಾರೆ.
ನಿನ್ನೆ ಅಶೋಕ ಮಾಂಡಪ್ಪ ಅಣಜಿ, ಜಾಕೀರ ಹುಸೇನ ಮೌಲಾಲಿ ಅರಳಿಮರದ, ಚನ್ನಪ್ಪ ಬಳ್ಳಾರಿ, ಸಿಕಂದರ ಖಾನ್ ಮೋದಿನಖಾನ ಮತ್ತಿಹಳ್ಳಿ ನಾಪತ್ರ ಹಿಂಪಡೆದುಕೊಂಡಿದ್ದಾರೆ.
ಇನ್ನು ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಇಬ್ಬರು ಅಭ್ಯರ್ಥಿಗಳಾದ ವಿಕ್ರಮ್ ಪಂಡಿತ್ (ಸಮಾಜವಾದಿ ಪಕ್ಷ) ಮತ್ತು ಡಿ ಅಬ್ದುಲ್ರೆಹಮಾನ್ ಹನೀಫ್ (ಪಕ್ಷೇತರ) ತಮ್ಮ ನಾಮಪತ್ರಗಳನ್ನು ಬುಧವಾರ ಹಿಂತೆಗೆದುಕೊಂಡಿದ್ದಾರೆ.