ನೀರಾವರಿ ಯೋಜನೆಗಳಿಗೆ ಸರ್ಕಾರದ ಮೊದಲ ಆದ್ಯತೆ: ಗೋವಿಂದ ಕಾರಜೋಳ

ರಾಜ್ಯದ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ರೂಪಿಸಲಾಗಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ ಹೇಳಿದ್ದಾರೆ.
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬೆಂಗಳೂರು: ರಾಜ್ಯದ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ರೂಪಿಸಲಾಗಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಬುಧವಾರ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ನಿಯಮ 68ರ ಅಡಿ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನ ವಿಳಂಬ ಕುರಿತು ಚರ್ಚೆಯಲ್ಲಿ ಅವರು, ಅಂತಾರಾಜ್ಯ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಹೇಳಿದರು. 

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದ ಅವರು, 2013 ರಿಂದ 2018ರವರೆಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 7728.80 ಕೋಟಿ ರೂ.ಮಾತ್ರ ವೆಚ್ಚ ಮಾಡಲಾಗಿದೆ. 2018 ರಿಂದ 2019ರ ಜುಲೈವರೆಗಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 1295.50 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಜುಲೈ 2019ರಿಂದ ಪ್ರಸಕ್ತ ಸರಕಾರದ ಅವಧಿಯಲ್ಲಿ 3326.70 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ವಿವರಗಳನ್ನು ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಒಂದು ಸವಾಲಾಗಿದೆ. ಏಕೆಂದರೆ ಇಲ್ಲಿ ಬಹುದೊಡ್ಡ ಪ್ರಮಾಣದ ಭೂಸ್ವಾಧೀನವಾಗಬೇಕಾಗಿದೆ. 2013ರ ಹೊಸ ಭೂಸ್ವಾಧೀನ ಕಾಯಿದೆಯಿಂದ ಭೂಸ್ವಾಧೀನದ ದರ ಹೆಚ್ಚಾಗಿದೆ. 1,34,000 ಎಕರೆ ಭೂಮಿ ಭೂಸ್ವಾಧೀನವಾಗಬೇಕಾಗಿದೆ. ಇದರಿಂದಾಗಿ ಒಟ್ಟು 78,000 ಕೋಟಿ ರೂಪಾಯಿಗಳ ಒಟ್ಟು ವೆಚ್ಚವಾಗಲಿದೆ ಎಂದು ತಿಳಿಸಿದರು.

ಬ್ರಿಟೀಷರ ಕಾಲದಲ್ಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ಆರಂಭವಾಗಿದ್ದು ಅಂದು ನಮ್ಮ ರಾಜ್ಯದಿಂದ ಮುಂಬೈ ಸರಕಾರದಲ್ಲಿ ಶಾಸಕರಾಗಿದ್ದ ಬಾಬು ಹುಜರೆಯವರು ಸಹ ಹೋರಾಟ ಮಾಡಿ ಜೈಲಿಗೆ ಹೋದವರು. ಮುಂಬೈ ಪ್ರಾಂತದ ಅಧಿಕಾರದ ಸಂದರ್ಭದಲ್ಲಿಯೇ ಕೊಯ್ನಾ ಅಣೆಕಟ್ಟು ಕಟ್ಟಿ 37 ಟಿಎಂಸಿಯಷ್ಟು ನೀರನ್ನು ತಾಳಿಕೋಟಿವರೆಗೆ ತರಲು ಯೋಜನೆ ರೂಪಿಸಲಾಗಿತ್ತು.

ಅಷ್ಟರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾಗಿ ಮೈಸೂರು ಮತ್ತು ಮುಂಬೈ ಸರಕಾರಗಳು ರಚನೆಯಾದವು. ಆಗ ಮುಂಬೈ ಪ್ರಾಂತದ ಸರಕಾರ 2 ಕೋಟಿ ರೂಪಾಯಿಗಳನ್ನು ಮೈಸೂರು ಸರಕಾರ ನೀಡಿದರೆ ನೀರಾವರಿ ಯೋಜನೆ ಕಾರ್ಯಗತಗೊಳಿಸುವುದಾಗಿ ತಿಳಿಸಿತ್ತು. ಆದರೆ ಮೈಸೂರು ಸರಕಾರ ಇದಕ್ಕೆ ಒಪ್ಪಲಿಲ್ಲ. ಒಂದು ವೇಳೆ ಒಪ್ಪಿದ್ದರೆ 40 ವರ್ಷಗಳ ಹಿಂದೆಯೇ ಅಖಂಡ ವಿಜಯಪುರ ಜಿಲ್ಲೆಯು ನೀರಾವರಿಯ ಸೌಲಭ್ಯ ಪಡೆಯುತ್ತಿತ್ತು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಅಂದಿನ ನೀರಾವರಿ ಸಚಿವರು ಘೋಷಿಸಿದ್ದರು. ಆದರೆ, ಆ ಅವಧಿಯಲ್ಲಿ ಕೇವಲ 7,728.80 ಕೋಟಿ ರೂಪಾಯಿಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ ಎಂದು ಸಚಿವರು ಸದನದ ಗಮನಕ್ಕೆ ತಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com