ದೇವಾಲಯಗಳ ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವೆ: ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಮೈಸೂರಿಗೆ ಶುಕ್ರವಾರ ಭೇಟಿ ನೀಡಿದ್ದು. ಈ ವೇಳೆ ಸುತ್ತೂರು ಮಠದಲ್ಲಿ ಯಡಿಯೂರಪ್ಪ ಅವರಿಗೆ ಪೂರ್ಣಕುಂಭ ಸ್ವಾಗತವನ್ನು ಕೋರಲಾಯಿತು.
Published: 18th September 2021 07:26 AM | Last Updated: 18th September 2021 01:12 PM | A+A A-

ಮಾಜಿ ಸಿಎಂ ಯಡಿಯೂರಪ್ಪ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಮೈಸೂರಿಗೆ ಶುಕ್ರವಾರ ಭೇಟಿ ನೀಡಿದ್ದು. ಈ ವೇಳೆ ಸುತ್ತೂರು ಮಠದಲ್ಲಿ ಯಡಿಯೂರಪ್ಪ ಅವರಿಗೆ ಪೂರ್ಣಕುಂಭ ಸ್ವಾಗತವನ್ನು ಕೋರಲಾಯಿತು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಅಲ್ಲಿಯೇ ಪ್ರಸಾದ, ಉಪಹಾರ ಸೇವನೆ ಮಾಡಿದರು. ಬಿಎಸ್ ವೈಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ ರಾಮದಾಸ್, ಮಾಜಿ ಸಚಿವ ವಿಜಯ್ ಶಂಕರ್ ಸಾಥ್ ನೀಡಿದ್ದರು.
ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಗುಲಗಳನ್ನ ತೆರವುಗೊಳಿಸಿದ್ದು ಸರಿಯಲ್ಲ. ದೇಗುಲ ತೆರವು ಸ್ಥಗಿತಗೊಳಿಸುವಂತೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ತೆರವಿಗೂ ಮುನ್ನ ಚರ್ಚೆ ಮಾಡಬೇಕಿತ್ತು. ದೇವಾಲಯಗಳನ್ನ ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತೇನೆಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸುತ್ತೂರು ಮಠಕ್ಕೆ ನಂಜನಗೂಡು ತಹಶೀಲ್ದಾನ್ ಮೋಹನ್ ಕುಮಾರಿ ಅವರು ಭೇಟಿ ನೀಡಿದ್ದು, ಇದೇ ವೇಳೆ ಯಡಿಯೂರಪ್ಪ ಅವರು ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಮೋದಿ ಯುಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಡಿಯೂರಪ್ಪ ಅವರು, ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದರು.
ಮತ್ತೊಂದೆಡೆ ದೇವಾಲಯ ತೆರವು ಕುರಿತು ಉಡುಪಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು, ದೇಗುಲ ಧ್ವಂಸಗೊಳಿಸಿರುವುದು ಸರಿಯಲ್ಲ. ಅಕ್ರಮವಾಗಿ ನಿರ್ಮಿಸಲಾಗಿದ್ದರೆ, ಈ ಕುರಿತು ಮೊದಲು ಅಧಿಕಾರಿಗಳು ನೋಟಿಸ್ ನೀಡಬೇಕು ಎಂದು ತಿಳಿಸಿದ್ದಾರೆ.