ಸದನದ ಪೀಠದಲ್ಲಿರುವವರು ನಿಷ್ಪಕ್ಷಪಾತಿಯಾಗಿರಬೇಕು: ವಿಧಾನಸಭಾಧ್ಯಕ್ಷರು, ಸಭಾಪತಿಗಳಿಗೆ ಓಂ ಬಿರ್ಲಾ ಸಲಹೆ

ಸದನದ ಪೀಠದಲ್ಲಿರುವವರು ನಿಸ್ಪಕ್ಷಪಾತವಾಗಿ ವರ್ತಿಸಬೇಕು, ಪಕ್ಷದ ಹೊರತಾಗಿ ಕಾರ್ಯನಿರ್ವಹಿಸಬೇಕು, ಪೀಠದ ನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು, ಪಕ್ಷದ ಹೊರತಾಗಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿಧಾನಸಭಾಧ್ಯಕ್ಷರು ಹಾಗೂ ಸಭಾಪತಿಗಳಿಗೆ ಸಲಹೆ ನೀಡಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಬೆಂಗಳೂರು: ಸದನದ ಪೀಠದಲ್ಲಿರುವವರು ನಿಸ್ಪಕ್ಷಪಾತವಾಗಿ ವರ್ತಿಸಬೇಕು, ಪಕ್ಷದ ಹೊರತಾಗಿ ಕಾರ್ಯನಿರ್ವಹಿಸಬೇಕು, ಪೀಠದ ನಿಯಮಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು, ಪಕ್ಷದ ಹೊರತಾಗಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ವಿಧಾನಸಭಾಧ್ಯಕ್ಷರು ಹಾಗೂ ಸಭಾಪತಿಗಳಿಗೆ ಸಲಹೆ ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಪ್ರಭುತ್ವ ವ್ಯವಸ್ಥೆಯ ದೇಶವಾಗಿರುವುದರಿಂದ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಪ್ರತಿನಿಧಿಗಳ ಪಾತ್ರ ಬಹುಮುಖ್ಯ. ಜನರ ಪ್ರತಿನಿಧಿಗಳು ಪಾರದರ್ಶಕವಾಗಿರಬೇಕು. ಜನತೆಯ ಆಸೆ, ಆಕಾಂಕ್ಷೆಗಳ ಪರ ಕೆಲಸ ಮಾಡಬೇಕು. ಪಂಚಾಯಿತಿಯಿಂದ ಸಂಸತ್‌ವರೆಗೆ ಜನರ ಧ್ವನಿ ಕೇಳಬೇಕು. ಜನತೆಯ ಸಮಸ್ಯೆಗಳ ಬಗ್ಗೆ ಅರಿವಿದ್ದಾಗ ಮಾತ್ರ ಈ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಲಿದೆ ಎಂದರು. 

ಸಾರ್ವಜನಿಕ‌ ಲೆಕ್ಕಪತ್ರ ಸಮಿತಿಗೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಡಿಸೆಂಬರ್ 4-5ರಂದು ದೆಹಲಿಯಲ್ಲಿ ಶತಮಾನೋತ್ಸವ ಆಚರಣೆ, ಯುವ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗುವುದು. ಮಹಿಳಾ ದಿನಾಚರಣೆ ಪ್ರಯುಕ್ತ ವಿಶಿಷ್ಟ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದಕ್ಕೆ ಮಹಿಳಾ ಜನಪ್ರತಿನಿಧಿಗಳಿಗೆ ಆಹ್ವಾನವಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಿದ್ದೇವೆ. ಹೀಗಾಗಿ ಈ ವಿಶಿಷ್ಟ ಕಾರ್ಯಕ್ರಮ ನಡೆಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವಿರೋಧ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಓಂಬಿರ್ಲಾ, ಕಾನೂನು‌ ಮಾಡುವುದು ಸರ್ಕಾರ. ಚರ್ಚೆಗಳ ನಂತರವೇ ಕಾನೂನು‌ ತರಲಾಗುತ್ತದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ವಿಧೇಯಕ ತರಲಾಗುತ್ತದೆ. ಸರ್ಕಾರ ವಿಧೇಯಕ ತರುತ್ತದೆ. ಬಿಎಸಿ‌ ಸಭೆಯಲ್ಲೂ ಚರ್ಚೆಯಾಗಿರುತ್ತದೆ.  ಕರ್ನಾಟಕದಲ್ಲಿ ಈ ನೀತಿ ಜಾರಿಯಾಗುತ್ತಿದೆ. ಕೆಲವರು ಗೊಂದಲಗಳನ್ನು ಸೃಷ್ಟಿಸಿ ಸಮಸ್ಯೆ ಎತ್ತಿರಬಹುದು. ವಿಧೇಯಕ ಜಾರಿ ವೇಳೆ ಇದು ಸಾಮಾನ್ಯ. ಸಾಧಕ ಬಾಧಕಗಳನ್ನ ನೋಡಿಯೇ ಸರ್ಕಾರ ನಿರ್ಧರಿಸುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದರು.

ಶಿಸ್ತು, ಸಭ್ಯತೆ ಶಾಸಕಾಂಗದಲ್ಲಿ ಮರೆಯಾಗುತ್ತಿರುವುದು ನಮ್ಮಲ್ಲರ ಚಿಂತೆಗೆ ಕಾರಣವಾಗಿದೆ. ಶಾಸಕಾಂಗದಲ್ಲಿ ಶಿಸ್ತು, ಸಭ್ಯತೆ ತರುವ ಪ್ರಯತ್ನ ನಡೆದಿದೆ. ಮುಖ್ಯಮಂತ್ರಿಗಳು ಸೇರಿದಂತೆ ಆಯಕಟ್ಟಿನಲ್ಲಿರುವವರು ಸಾರ್ವಜನಿಕರಿಗೆ ಅನುಕೂಲ ಆಗುವ ಕಾರ್ಯಕ್ರಮ ನೀಡಬೇಕು. ಜನರಿಗೆ ಉತ್ತಮ ಸಂದೇಶ ರವಾನೆಯಾಗಬೇಕು. ಅಂತೆಯೇ ಮಾಧ್ಯಮಗಳು ಪ್ರಜಾಪ್ರಭುತ್ವದ ವಿಶ್ವಾಸ ಉಳಿಸಬೇಕು ಎಂದು ಕರೆ ನೀಡಿದರು.

ಕೋವಿಡ್‌ನಿಂದಾಗಿ ಸದನ ನಡೆಸುವುದು ಕಷ್ಟವಾಗಿತ್ತು. ಆದರೂ ನಾವು ಸಂಸತ್ ಕಲಾಪ ನಡೆಸಿದ್ದೇವೆ. ಸದನದಲ್ಲಿ ಚರ್ಚೆ, ಜೋರು‌ ಧ್ವನಿ ಎಲ್ಲವೂ ಇರಬೇಕು. ಹಾಗಿದ್ದಾಗ ಮಾತ್ರವೇ ಉತ್ತಮ ನಿರ್ಣಯ ಸಾಧ್ಯ. ಆದರೆ ಸದಸ್ಯರು ಶಿಸ್ತನ್ನು ಮೀರಬಾರದು ಅಷ್ಟೇ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದರು.

ಸ್ಪೀಕರ್ ಕಾಗೇರಿ ಮಾತನಾಡಿ ವಿಪಕ್ಷ ಕಾಂಗ್ರೆಸ್ ಆರೋಪವಾದ ವಿಧಾನಸಭೆಯಲ್ಲಿ ಓಂ ಬಿರ್ಲಾ ಭಾಷಣ ಸರಿಯಲ್ಲವೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.  ಕಳೆದ 2002 ಜೂನ್ 24 ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕರ್ನಾಟಕದ ವಿಧಾನಸಭೆಯಲ್ಲಿ ಅಂದಿನ ಲೋಕಸಭೆ ಸ್ಪೀಕರ್ ಮನೋಹರ್ ಜೋಶಿ ಮಾತನಾಡಿದ್ದಾರೆ. ಗುಜರಾತ್ ನ ಕೆವಾಡಿಯದಲ್ಲಿ ನಡೆದ ಸಭೆಯಲ್ಲಿ ಲೋಕಸಭೆ, ವಿಧಾನಸಭೆಗಳ ಸ್ಪೀಕರ್ ಭಾಗವಹಿಸಿದ್ದರು. ಆ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಭಾಗಿಯಾಗಿದ್ದಾರೆ ಎಂದರು. 

ಲಕ್ನೋದ ವಿಧಾನಸಭೆಯಲ್ಲಿ ನಾನು ಭಾಗಿಯಾಗಿದ್ದೆ. ರಾಜಸ್ಥಾನ ವಿಧಾನಸಭೆಯಲ್ಲೂ ಸ್ಪೀಕರ್ ಭಾಷಣ ಆಗಿದೆ. ಬೇರೆ ರಾಜ್ಯಗಳ ವಿಧಾನಸಭೆಯಲ್ಲೂ ಭಾಷಣ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಕೂಡ ಮಾತನಾಡಿದ್ದಾರೆ.ಲೋಕಸಭೆ ಸ್ಪೀಕರ್ ಇನ್ನೊಂದು ರಾಜ್ಯದ ವಿಧಾನಸಭೆಯಲ್ಲಿ ಮಾತನಾಡಿದ್ದು ಇದೇ ಮೊದಲೇನಲ್ಲ. ಭಾಗವಹಿಸಿದ್ದು ತಪ್ಪು ಎನ್ನುವವರಿಗೆ ಇದು ಅರ್ಥವಾಗಿಲ್ಲ.ಸಂವಿಧಾನ ಉಲ್ಲಂಘನೆಯಾಗಿಲ್ಲ. ಇದನ್ನು ವಿರೋಧಿಸುವವರು ತಿಳಿದುಕೊಳ್ಳಬೇಕು ಎಂದು ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com