
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಿದ್ಧತಾ ಕಾರ್ಯಗಳನ್ನು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಚಿಂತನ ಮಂಥನ ನಡೆಸುತ್ತಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಆಡಳಿತಾರೂಢ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.
ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕರ್ನಾಟಕ ಕಾಂಗ್ರೆಸ್ ಪಟಾಲಂ ದಿಲ್ಲಿಯಲ್ಲಿದೆ. ಕನ್ನಡಿಗ ಖರ್ಗೆ ಅವರೇ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕೆ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ಸ್ವಂತಿಕೆಯನ್ನೇ ಮರೆತು "ಜೀ ಹುಜೂರ್" ಸಂಸ್ಕೃತಿಗೆ ಶರಣಾಗಿದ್ದಾರೆ ಎಂದು ಟೀಕಿಸಿದೆ.
ರಾಜ್ಯಾಧ್ಯಕ್ಷರಿಂದ ಹಿಡಿದು ಯುವ ಕಾಂಗ್ರೆಸ್ ಅಧ್ಯಕ್ಷರವರೆಗೂ ಬೇಲ್ ಮೇಲೆ ಬಾಳು ಸಾಗಿಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಕದ ರಾಜ್ಯದಿಂದ ನಾಯಕರನ್ನು ಆಮದು ಮಾಡಿಕೊಂಡು ಅವರಿಂದಲೂ ರಾಜ್ಯವನ್ನು ಲೂಟಿ ಹೊಡೆಸಿ ಗೃಹ ಮಂತ್ರಿಗಳನ್ನಾಗಿಯೂ ಮಾಡಿದ್ದರು ಎಂದು ಆರೋಪಿಸಿದೆ.
ಡಬಲ್ ಎಂಜಿನ್ ವೇಗದ ಅಭಿವೃದ್ಧಿಯನ್ನು ರಾಜ್ಯಕ್ಕೆ ನೀಡಲು ತಲೆ ಕೆಳಗಾಗಿ ನಿಂತರೂ ಸಾಧ್ಯವಾಗದ ಕಾಂಗ್ರೆಸ್ ಯಾವ ಮಟ್ಟಕ್ಕಾದರೂ ಇಳಿದು ಅಧಿಕಾರಕ್ಕೆ ಬಂದು ರಾಜ್ಯವನ್ನು ಎಟಿಎಂ ಆಗಿ ಮಾಡಿಕೊಂಡು ಲೂಟಿ ಹೊಡೆಯಲು ಹವಣಿಸುತ್ತಿದೆ. ಕನ್ನಡಿಗರು ಇದನ್ನು ಎಂದಿಗೂ ಸಾಧ್ಯವಾಗಿಸುವುದಿಲ್ಲ ಎಂದು ಹೇಳಿದೆ.
Advertisement