ಬೊಮ್ಮಾಯಿ ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪದ ಲಿಂಗಾಯತ ಸಮುದಾಯ; ಕಾಂಗ್ರೆಸ್ ಗಿಂತ ಕೇಸರಿ ಬ್ರಿಗೇಡ್ ಗೆ ಬಿಎಸ್ ವೈ ಹೆಚ್ಚು ಅಪಾಯಕಾರಿ!

ಮುಂದಿನ ವರ್ಷ ನಡೆಯಲಿರುವ  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಬೆಂಬಲವನ್ನು ಹೆಚ್ಚಿಸಲು ಬಿಜೆಪಿ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದೆ.
ಬೊಮ್ಮಾಯಿ ಮತ್ತು ಯಡಿಯೂರಪ್ಪ
ಬೊಮ್ಮಾಯಿ ಮತ್ತು ಯಡಿಯೂರಪ್ಪ

ಮೈಸೂರು: ಮುಂದಿನ ವರ್ಷ ನಡೆಯಲಿರುವ  ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಬೆಂಬಲವನ್ನು ಹೆಚ್ಚಿಸಲು ಬಿಜೆಪಿ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದೆ.

ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಪ್ರಬಲ ವ್ಯಕ್ತಿ ಬಿಎಸ್ ಯಡಿಯೂರಪ್ಪ ಅವರ ಹೆಸರು ಇರಲಿಲ್ಲ, ಇದರಿಂದಾಗಿ ಅವರ ಬೆಂಬಲಿಗರನ್ನು ಕೆರಳಿಸಿತ್ತು, ಇದರ ಜೊತೆಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯ  ಇರುವುದು ಸ್ಪಷ್ಟವಾಗಿತ್ತು, ಕಾರ್ಯಕರ್ತರ ಅಸಮಾಧಾನ ಪಕ್ಷಕ್ಕೆ ಒಳ್ಳೆಯದಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತ್ತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಯಡಿಯೂರಪ್ಪ ಅವರ ಮನವೊಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡುವಂತೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮತ್ತು ಮಾಜಿ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮುಖಂಡರು ದೃಢವಾಗಿ ಹೇಳಿಕೊಳ್ಳುತ್ತಿದ್ದಾರೆ .  ಪಕ್ಷದ ರಾಷ್ಟ್ರೀಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಅವರನ್ನು ಪಕ್ಷವು ಘನತೆಯಿಂದ ನಡೆಸಿಕೊಂಡಿದೆ ಎಂದು ಬಿಜೆಪಿ ತಿಳಿಸಿದೆ.

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ನನ್ನ ಹಾಗೂ ಅವರ ನಡುವಿನ ಸಂಬಂಧ ತಂದೆ-ಮಗನ ಸಂಬಂಧವಾಗಿದೆ, ಯಡಿಯೂರಪ್ಪನವರನ್ನು ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವುದು ಶುದ್ಧ ಸುಳ್ಳು. ಅವರನ್ನು ಮುಂದಿಟ್ಟುಕೊಂಡೇ ಚುನಾವಣೆಗೆ ಹೋಗುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದ್ದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪದಲ್ಲಿ ಸತ್ಯಾಂಶ ಇಲ್ಲ. ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ. ನಾನು ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಇದನ್ನೇ ಮುಂದುವರೆಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.

ಯಡಿಯೂರಪ್ಪನವರನ್ನು ಉತ್ತಮವಾಗಿ ನಡೆಸಿಕೊಳ್ಳುವುದು, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹೋರಾಡಲು ಅವರನ್ನು ಪ್ರಮುಖ ವೇದಿಕೆಗೆ ತರುವುದು ಸಿಎಂ ಮತ್ತು ಪಕ್ಷದ ನಾಯಕರ ಮೇಲಿರುವ ಜವಾಬ್ದಾರಿ.

ಪ್ರಬಲವಾದ ಲಿಂಗಾಯತ ಸಮುದಾಯ ಮತ್ತು ಗ್ರಾಮೀಣ ಜನಸಮೂಹದಲ್ಲಿ ಅತಿ ಹೆಚ್ಚು ಪ್ರಭಾವಿ ನೆಲೆಯನ್ನು ಹೊಂದಿರುವುದರಿಂದ ಒಗ್ಗಟ್ಟಿನ ಕಾಂಗ್ರೆಸ್‌ಗಿಂತ ಕೇಸರಿ ಬ್ರಿಗೇಡ್‌ಗೆ ಯಡಿಯೂರಪ್ಪ ಹೆಚ್ಚು ಅಪಾಯಕಾರಿಯಾಗುತ್ತಾರೆ. ಇದು ಪಕ್ಷದ ಚುನಾವಣಾ ಭವಿಷ್ಯವನ್ನು ಹಾಳುಮಾಡಬಹುದು. ಏಕೆಂದರೆ ಹಿಂದೆ, ಅವರು ಕೆಜೆಪಿ ಪಕ್ಷವನ್ನು ಕಟ್ಟಿದ್ದಾಗ ಶೇ. 9.5 ರಷ್ಚು ಮತಗಳನ್ನು ಗಳಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. 2013 ರಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಹಾಯ ಮಾಡಿದರು.

ಬಿಜೆಪಿಯ ಸಣ್ಣ ತಪ್ಪು ಲೆಕ್ಕಾಚಾರಗಳು ಪಕ್ಷಕ್ಕೆ ಮಾರಕವಾಗಬಹುದು ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಲಿಂಗಾಯತ ಸಮುದಾಯವು ಬೊಮ್ಮಾಯಿ ಅವರನ್ನು  ಸಂಪೂರ್ಣವಾಗಿ ತಮ್ಮ ನಾಯಕನನ್ನಾಗಿ ಸ್ವೀಕರಿಸಿಲ್ಲ.  ಯಡಿಯೂರಪ್ಪ ಅವರ ಸ್ವಾಭಾವಿಕ ಉತ್ತರಾಧಿಕಾರಿ ವ ಪುತ್ರ ಬಿ.ವೈ.ವಿಜಯೇಂದ್ರ ಎಂಬುದನ್ನು ಪಕ್ಷ ಯಾವುದೇ ತಕರಾರಿಲ್ಲದೇ ಒಪ್ಪಿಕೊಳ್ಳಬೇಕು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com