'2022ರ ಡಿಸೆಂಬರ್‌ನಲ್ಲೇ ವಿಧಾನಸಭೆ ಚುನಾವಣೆ, 'ಪಂಚರತ್ನ' ಜಾರಿ ಇಲ್ಲವೇ ರಾಜಕೀಯ ನಿವೃತ್ತಿ': ಎಚ್‌.ಡಿ. ಕುಮಾರಸ್ವಾಮಿ

2023ರ ಏಪ್ರಿಲ್‌ ಬದಲಿಗೆ ಈ ವರ್ಷದ ಡಿಸೆಂಬರ್‌ ವೇಳೆಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ಹೇಳಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೀದರ್: ಇಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ರಾಜ್ಯದಲ್ಲಿ 2023ರ ಏಪ್ರಿಲ್‌ ಬದಲಿಗೆ ಈ ವರ್ಷದ ಡಿಸೆಂಬರ್‌ ಒಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಸಾಧ್ಯತೆ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶನಿವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಧಿಪೂರ್ವ ಚುನಾವಣೆ ನಡೆಯುವ ನಿರೀಕ್ಷೆಯಲ್ಲಿ ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಆಯ್ಕೆಯನ್ನು ಆರಂಭಿಸಿದೆ. ತನ್ನ 'ಪಂಚ ರತ್ನ' ಕಾರ್ಯಕ್ರಮವನ್ನು ಮುಂದಿನ ತಿಂಗಳು ಪ್ರಕಟಿಸಲಿದೆ. ಈ ಕಾರ್ಯಕ್ರಮವು ಶಿಕ್ಷಣ, ಆರೋಗ್ಯ, ವಸತಿ, ರೈತರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಜೊತೆಗೆ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಪಕ್ಷವು ಈಗಾಗಲೇ ‘ಎ’ ವರ್ಗದ ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮೊದಲ ಸುತ್ತಿನಲ್ಲಿ ಕಾರ್ಯಕ್ರಮ ನಡೆಯಲಿದೆ' ಎಂದರು.

ಜೆಡಿಎಸ್ ಸರ್ಕಾರವು ಐದು ವರ್ಷಗಳ ಅವಧಿಗೆ ಪೂರ್ಣವಾಗಿ ಉಳಿಯಲು ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು, 'ರಾಜ್ಯದಲ್ಲಿ ಸಂಪತ್ತನ್ನು ಸೃಷ್ಟಿಸಲು ಸಾಕಷ್ಟು ಸಂಪನ್ಮೂಲಗಳಿದ್ದು, ಅದಕ್ಕಾಗಿ ಕೇಂದ್ರದ ಮೊರೆ ಹೋಗುವ ಅಗತ್ಯವಿರಲಿಲ್ಲ. ರೈತರ ಸಾಲ ಮನ್ನಾ ಮಾಡುವುದು ಶಾಶ್ವತ ಪರಿಹಾರವಲ್ಲ. ಆದರೆ, ರೈತರ ಸಾಲದ ಹೊರೆಯನ್ನು ಇಳಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ' ಎಂದು ಕುಮಾರಸ್ವಾಮಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಚುನಾವಣೆ ನಂತರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಭ್ಯರ್ಥಿಗಳ ಪಟ್ಟಿ
ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಶನಿವಾರ ಇಲ್ಲಿ ಪ್ರಕಟಿಸಿದರು. ಕಲಬುರಗಿ ಉತ್ತರದಿಂದ ನಾಸೀರ್ ಹುಸೇನ್ ಉಸ್ತಾದ್, ಸೇಡಂನಿಂದ ಬಾಲರಾಜ್ ಗುತ್ತೇದಾರ್, ಚಿಂಚೋಳಿಯಿಂದ ಸಂಜೀವನ್ ಯಾಕಾಪುರ, ಅಫಜಲಪುರದಿಂದ ಶಿವಕುಮಾರ್ ನಾಟೀಕಾರ, ಆಳಂದದಿಂದ ಮಹೇಶ್ವರಿ, ಜೇವರ್ಗಿ ಕ್ಷೇತ್ರದಿಂದ ಕೇದಾರಲಿಂಗಯ್ಯ ಅವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಲಿದೆ ಎಂದ ಅವರು, ಕಲಬುರಗಿ-ದಕ್ಷಿಣ ಮತ್ತು ಚಿತ್ತಾಪುರ ಕ್ಷೇತ್ರಗಳ ಹೆಸರನ್ನು ಪಕ್ಷವು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಹೇಳಿದರು.

ಪಂಚರತ್ನ ಜಾರಿ ಇಲ್ಲವೇ ರಾಜಕೀಯ ನಿವೃತ್ತಿ
ಇನ್ನೊಂದೆಡೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವಂತೆ ಮತದಾರರಿಗೆ ಕರೆ ನೀಡಿದರು. ಪಕ್ಷ ಅಧಿಕಾರಕ್ಕೆ ಬಂದರೆ 'ಪಂಚರತ್ನ' ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತೇವೆ. ಒಂದು ವೇಳೆ ಅನುಷ್ಠಾನಗೊಳಿಸಲು ವಿಫಲವಾದರೆ, ಪಕ್ಷವನ್ನು ವಿಸರ್ಜಿಸಿ ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದರು.

ಶನಿವಾರ ಇಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ, ಎರಡೂ ಬಾರಿಯೂ ನನ್ನ ಅಧಿಕಾರಾವಧಿ ಕಡಿಮೆಯಿತ್ತು. ಆ ಅಲ್ಪಾವಧಿಯಲ್ಲಿಯೂ ರೈತರ ಸಾಲ ಮನ್ನಾ, ಗ್ರಾಮ ವಾಸ್ತವ್ಯ ಸೇರಿ ಜನರ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com