ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನೀವು ಒಪ್ಪದಿದ್ದ ಮೇಲೆ ಕೂಡಲೇ ಅವರನ್ನು ಪದಚ್ಯುತಗೊಳಿಸಿ: ಕಾಂಗ್ರೆಸ್'ಗೆ ಅರುಣ್ ಸಿಂಗ್ ಸವಾಲು

ಹಿಂದು ಕುರಿತು ಸತೀಶ್ ಜಾರಕಿಹೊಳಿಯವರು ನೀಡಿರುವ ಹೇಳಿಕೆಯನ್ನು ಒಪ್ಪದಿದ್ದರೆ ಕೂಡಲೇ ಅವರನ್ನು ಪದಚ್ಯುತಗೊಳಿಸಿ ಎಂದು ಕಾಂಗ್ರೆಸ್'ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದ್ದಾರೆ.
ಅರುಣ್ ಸಿಂಗ್
ಅರುಣ್ ಸಿಂಗ್

ಬೆಂಗಳೂರು: ಹಿಂದು ಕುರಿತು ಸತೀಶ್ ಜಾರಕಿಹೊಳಿಯವರು ನೀಡಿರುವ ಹೇಳಿಕೆಯನ್ನು ಒಪ್ಪದಿದ್ದರೆ ಕೂಡಲೇ ಅವರನ್ನು ಪದಚ್ಯುತಗೊಳಿಸಿ ಎಂದು ಕಾಂಗ್ರೆಸ್'ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯಾವಾಗಲೂ ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತದೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ನಮ್ಮ ಪ್ರಾಚೀನ ಸಂಸ್ಕೃತಿಗೆ ಮಾಡಿರುವ ಮಾನಹಾನಿಯಾಗಿದೆ. ಇದು ಅತ್ಯಂತ ಖಂಡನೀಯ. ಜನರು ತಕ್ಕ ಉತ್ತರ ನೀಡುತ್ತಾರೆ. ಅವರ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪದಿದ್ದರೆ ಕೂಡಲೇ ಅವರನ್ನು ಪದಚ್ಯುತಗೊಳಿಸಬೇಕು ಎಂದು ಹೇಳಿದ್ದಾರೆ.

ನಿಪ್ಪಾಣಿಯಲ್ಲಿ ಮಾತನಾಡಿದ್ದ ಜಾರಕಿಹೊಳಿಯವರು, “‘ಹಿಂದೂ’ ಎಂಬ ಪದ ಎಲ್ಲಿಂದ ಬಂತು? ಇದು ನಮ್ಮ ಪದವಲ್ಲ, ಪರ್ಷಿಯನ್ ನಿಂದ ಬಂದಿದ್ದು. ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಹೇಳಿದ್ದರು.

ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷ ಹೆಸರು ಇಲ್ಲದ ಹಾಗೆ ಆಗುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಕೂಡ ಗೆದ್ದಿಲ್ಲ ಎಂದು ಅರುಣ್ ಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪ್ರವಾಸ ನಡೆಯುತ್ತಿದೆ. ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಚರ್ಚಿಸುತ್ತಿದ್ದೇವೆ. ಬೂತ್ ಮಟ್ಟದ ಕಾರ್ಯಕರ್ತರಿಂದಲೇ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.

ಸಂಘಟನೆ ಮತ್ತು ಕಾರ್ಯಕರ್ತರ ಪಕ್ಷ ಬಿಜೆಪಿ. ರಾಜ್ಯದಲ್ಲಿ 150 ಸೀಟು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ಪಕ್ಷ ಹೆಸರು ಇಲ್ಲದ ಹಾಗೆ ಆಗುತ್ತಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿಲ್ಲ. ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಕೂಡ ಕಾಂಗ್ರೆಸ್ ಸೋಲುತ್ತದೆ. ಎಲ್ಲಾ ಕಡೆ ಬಿಜೆಪಿ ಗೆದ್ದುಕೊಂಡು ಬರುತ್ತಿದೆ. ಮುಂದಿನ ದಿನದಲ್ಲೂ ಕರ್ನಾಟಕದಲ್ಲಿ ಬಿಜೆಪಿ ವಿಜಯಶಾಲಿಯಾಗುತ್ತದೆ ಎಂದರು.

ಕರ್ನಾಟಕದಲ್ಲಿ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ. ನಾವು ಮಾಡಿರುವ ಕೆಲಸ ನೋಡಿ ಕರ್ನಾಟಕದಲ್ಲಿ ಸಾಕಷ್ಟು ಇನ್ವೆಸ್ಟ್ ಆಗಿದೆ. ರಾಜ್ಯದ ಎಲ್ಲಾ ಸಚಿವರು ಗ್ರೌಂಡ್ ನಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಕೆಲಸ ರಾಜ್ಯದ ಜನಕ್ಕೆ ಇಷ್ಟ ಆಗಿದೆ. ಹಾಗಾಗಿ ಮುಂದಿನ ಬಾರಿಯೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿರುತ್ತದೆ. ಕಾಂಗ್ರೆಸ್‍ನವರ ಬಳಿ ಹೇಳಿಕೊಳ್ಳಲು ಏನೂ ಇಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com