ನನ್ನಪ್ಪನಿಗೆ ವರುಣಾ ಕ್ಷೇತ್ರ ಲಕ್ಕಿ, ಅಲ್ಲಿ ಸ್ಪರ್ಧಿಸಿದ್ರೆ ಮುಖ್ಯಮಂತ್ರಿ ಆಗೋದು ಪಕ್ಕಾ: ಯತೀಂದ್ರ ಸಿದ್ದರಾಮಯ್ಯ

ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ  ಅವರು, ತಮ್ಮ ವರುಣಾ ವಿಧಾನಸಭಾ ಕ್ಷೇತ್ರದಿಂದ ನನ್ನ ತಂದೆ ಸ್ಪರ್ಧಿಸಲಿ. ಅಪ್ಪ ವರುಣಾದಿಂದ ಗೆದ್ದು ಸಿಎಂ ಆದರು, ಹೀಗಾಗಿ ಅವರಿಗೆ ವರುಣಾ ಕ್ಷೇತ್ರ ಲಕ್ಕಿ ಎಂದು ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಯತೀಂದ್ರ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಮೈಸೂರು: 2023ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಿದ್ದರಾಮಯ್ಯ ಅವರನ್ನು ಪಕ್ಷದ ಮುಖ್ಯಮಂತ್ರಿ  ಅಭ್ಯರ್ಥಿ ಎಂದು ಬಿಂಬಿಸಲು ಸಿದ್ದ ಅವರ ಪಾಳಯದಿಂದ ಒತ್ತಡ ಕೇಳಿಬರುತ್ತಿರುವ ಬೆನ್ನಲ್ಲೇ, ಅವರ ಮಗ ಮತ್ತು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಗೆ ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ  ಅವರು, ತಮ್ಮ ವರುಣಾ ವಿಧಾನಸಭಾ ಕ್ಷೇತ್ರದಿಂದ ನನ್ನ ತಂದೆ ಸ್ಪರ್ಧಿಸಲಿ. ಅಪ್ಪ ವರುಣಾದಿಂದ ಗೆದ್ದು ಸಿಎಂ ಆದರು, ಹೀಗಾಗಿ ಅವರಿಗೆ ವರುಣಾ ಕ್ಷೇತ್ರ ಲಕ್ಕಿ ಎಂದು ಹೇಳಿದ್ದಾರೆ.

'ಈಗ ಅವರೇ (ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗುವ ಅವಕಾಶಗಳಿವೆ. ಈ ಹಿಂದೆ ವರುಣಾದಿಂದ ಸ್ಪರ್ಧಿಸಿದಾಗಲೆಲ್ಲಾ ಅಧಿಕಾರ ಸಿಕ್ಕಿದೆ. ಅವರಿಗೆ ಈ ಬಾರಿಯೂ ಮುಖ್ಯಮಂತ್ರಿ ಹುದ್ದೆ ಸಿಗಬಹುದು. ಹೀಗಾಗಿ ಅವರು ಇಲ್ಲಿಂದ (ವರುಣಾ) ಸ್ಪರ್ಧಿಸಬೇಕು ಎಂಬುದು ನನ್ನ ಆಸೆ’ ಎಂದು ಯತೀಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಂದೆಗೆ ವೈಯಕ್ತಿಕವಾಗಿ ಮನವಿ ಮಾಡಿದ್ದು, ನನ್ನ ಬೇಡಿಕೆಯೂ ಹೌದು. ಎಲ್ಲಿಂದ ಸ್ಪರ್ಧಿಸಬೇಕು ಎಂದು ಅವರಿನ್ನು ನಿರ್ಧರಿಸಿಲ್ಲ. ವಿವಿಧ ಕ್ಷೇತ್ರಗಳ ರಾಜಕೀಯ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅವರಿಗೆ ಸುರಕ್ಷಿತವಾದ ವಿವಿಧ ಕ್ಷೇತ್ರಗಳಿವೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅಲ್ಲಿ ಗೆಲ್ಲಬಹುದು' ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ ಮತ್ತು ಅವರ ಬೆಂಬಲಿಗರು ಮತ್ತು ಆಪ್ತರು ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಪದೇ ಪದೆ ಪ್ರಯತ್ನಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಇದೇ ರೀತಿಯ ಆಕಾಂಕ್ಷೆಯನ್ನು ಹೊಂದಿದ್ದು, ಅವರ ಬೆಂಬಲಿಗರು ಸಹ ಅವರನ್ನು ಸಿಎಂ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಬ್ಬರು ಪ್ರಮುಖ ನಾಯಕರು ಇರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

2023ರ ಚುನಾವಣೆ ಅವರ ಕೊನೆಯ ಚುನಾವಣೆಯಾಗಿರುವುದರಿಂದ ಸಿದ್ದರಾಮಯ್ಯನವರು ವರುಣಾದಿಂದ ಸ್ಪರ್ಧಿಸಬೇಕು ಎಂದು ಪ್ರತಿಪಾದಿಸಿದ ಯತೀಂದ್ರ, ಈ ಹಿಂದೆ ವರುಣಾ ಕ್ಷೇತ್ರವನ್ನು ಪ್ರತಿನಿಧಿಸಿದಾಗ ಪ್ರತಿಪಕ್ಷದ ನಾಯಕರಾಗಿ ನಂತರ ಮುಖ್ಯಮಂತ್ರಿಯಾದ ಕಾರಣ ವರುಣ ಅವರಿಗೆ ಅದೃಷ್ಟವನ್ನು ತರುತ್ತದೆ. ಒಂದು ವೇಳೆ ತಂದೆಯವರು ವರುಣಾದಿಂದಲೇ ಸ್ಪರ್ಧಿಸಲು ನಿರ್ಧರಿಸಿದರೆ, ನಾನು ಬೇರೆಡೆ ಸ್ಪರ್ಧಿಸುವುದಿಲ್ಲ. ಬದಲಿಗೆ ತಂದೆಯ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವೆ ಎಂದು ಸ್ಫಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ಸದ್ಯ ರಾಜ್ಯದ ಉತ್ತರ ಭಾಗದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಕ್ಷೇತ್ರದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗದ ಕಾರಣದಿಂದ ಮತ್ತೊಮ್ಮೆ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸೂಚಿಸಿದ್ದಾರೆ.

ಬಾದಾಮಿ, ವರುಣಾ, ಹೆಬ್ಬಾಳ, ಕೋಲಾರ, ಕೊಪ್ಪಳ ಮತ್ತು ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಒತ್ತಡವಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದು, ಈವರೆಗೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಅವರು ಇತ್ತೀಚೆಗೆ ಕೋಲಾರಕ್ಕೆ ಭೇಟಿ ನೀಡಿದ್ದು, ಅವರು ಅಲ್ಲಿಂದಲೇ ಸ್ಪರ್ಧೆಗಿಳಿಯಬಹುದು ಎನ್ನುವ ಊಹಾಪೋಹಗಳಿಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com