ಸೆಪ್ಟಂಬರ್ 30 ರಿಂದ ಕರ್ನಾಟಕದಲ್ಲಿ 'ಭಾರತ್ ಜೋಡೋ' ಪಾದಯಾತ್ರೆ: ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈಗಾಗಲೇ ಕನ್ಯಾಕುಮಾರಿಯಿಂದ ಭಾರತ್​ ಜೋಡೋ ಪಾದಯಾತ್ರೆ ಆರಂಭಿಸಿದ್ದಾರೆ. ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಯಾತ್ರೆ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈಗಾಗಲೇ ಕನ್ಯಾಕುಮಾರಿಯಿಂದ ಭಾರತ್​ ಜೋಡೋ ಪಾದಯಾತ್ರೆ ಆರಂಭಿಸಿದ್ದಾರೆ. ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಯಾತ್ರೆ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಯಾತ್ರೆ ಸಂದರ್ಭದಲ್ಲಿ ದಸರಾ ವೇಳೆ 2 ದಿನ ವಿಶ್ರಾಂತಿ ನೀಡಲಾಗುವುದು. ರಾಜ್ಯದ ಯಾತ್ರೆಯಲ್ಲಿ ಆಸಕ್ತಿ ಇರುವವರಿಗೆ ನಡೆಯಲು ಅವಕಾಶ ಕಲ್ಪಿಸಿಕೊಡಲಿದ್ದೇವೆ. ಕೆಲವರು 1 ದಿನ ನಡೆದರೆ, ಮತ್ತೆ ಕೆಲವರು 21 ದಿನ ನಡೆಯಬಹುದು. ಹೀಗಾಗಿ ನಾವು ಪಕ್ಷಾತೀತವಾಗಿ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲು ಆನ್ ಲೈನ್ ನೋಂದಣಿ ಆರಂಭಿಸುತ್ತಿದ್ದೇವೆ.

ಈ ಯಾತ್ರಿಗಳಿಗೆ ವಾಸ್ತವ್ಯ, ಆಹಾರ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇವೆ. ಪ್ರದೇಶ ಯಾತ್ರಿಗಳ ಜತೆಗೆ ಸ್ವಯಂ ಇಚ್ಛೆ ಯಾತ್ರಿಗಳು ಹಾಗೂ ಡಿಜಿಟಲ್ ಯಾತ್ರಿಗಳಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಸ್ವಾತಂತ್ರ್ಯ ನಡಿಗೆ ಸಮಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು 76 ಸಾವಿರ ಜನ ಇದ್ದರು. ಹೀಗಾಗಿ ಯುವಕರಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲು ನೋಂದಣಿ ಆರಂಭಿಸಿದ್ದೇವೆ. ನೀವು ಕೂಡ ನೋಂದಣಿ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಎಲ್ಲ ವರ್ಗಗಳ ಜನರ ಮಧ್ಯೆ ಸಾಮರಸ್ಯ ಕಲ್ಪಿಸಿ ನಮ್ಮ ನಾಡನ್ನು ಸರ್ವಜನಾಂಗದ ಶಾಂತಿ ತೋಟವಾಗಿ ಮಾಡಿ ದೇಶದಲ್ಲಿ ಶಾಂತಿ ಕಾಪಾಡುವುದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆದಾಯ ಕುಸಿತದ ವಿರುದ್ಧ, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಉತ್ತಮ ಆಡಳಿತಕ್ಕೆ, ದೇಶ ಹಾಗೂ ರಾಜ್ಯದ ರೈತರು, ಕಾರ್ಮಿಕರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಈ ಯಾತ್ರೆ ಮಾಡುತ್ತಿದ್ದೇವೆ ಎಂದರು.

ಕರ್ನಾಟಕದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ ಮಧ್ಯಾಹ್ನ ಬಿಡುವಿನ ವೇಳೆ ನಿರುದ್ಯೋಗಿ ಯುವಕರಿಗೆ ರಾಹುಲ್ ಗಾಂಧಿ ಅವರ ಜತೆ ಸಂವಾದ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇವರ ಜತೆಗೆ ಮಹಿಳೆಯರು, ಕಾರ್ಮಿಕರು, ಸಂಘ ಸಂಸ್ಥೆಗಳು, ಎರಡು ಕಡೆ ರೈತರು, ಪರಿಶಿಷ್ಟರು, ನಾಗರೀಕ ಸಮಾಜದವರು, ಅಲ್ಪಸಂಖ್ಯಾತರು, ಶ್ರಮಿಕರಿಗೂ ಸಂವಾದಕ್ಕೆ ಒಂದೊಂದು ದಿನ ಅವಕಾಶ ಕಲ್ಪಿಸುತ್ತೇವೆ.

ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕೃಷ್ಣ ಭೈರೇಗೌಡ, ಪದ್ಮಾವತಿ ಅವರು ಸೇರಿದಂತೆ ನಗರದ ಪ್ರಮುಖ ನಾಯಕರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಈ ಸಮಿತಿ 15 ದಿನಗಳ ಒಳಗೆ ಬೆಂಗಳೂರು ನಾಗರೀಕರಿಂದ ಆನ್ ಲೈನ್ ಮೂಲಕ ಅಭಿಪ್ರಾಯ ಸಂಗ್ರಹಿಸಲಿದೆ. ಬೆಂಗಳೂರಿನ ಜನರ ಧ್ವನಿ ಕಾಂಗ್ರೆಸ್ ಧ್ವನಿಯಾಗಬೇಕು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇನ್ನು ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಸರ್ವಪಕ್ಷ ಪರಿಹಾರ ಸಮಿತಿ ರಚನೆಯಾಗಬೇಕು. ಇದರಲ್ಲಿ ನಾಗರೀಕ ಸಮಾಜದ ಪ್ರತಿನಿಧಿಗಳು ಇರುತ್ತಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ಹಾನಿಯಾಗಿದ್ದರೆ ಅವರಿಗೆ 5 ಲಕ್ಷದಿಂದ 125 ಲಕ್ಷದವರೆಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com