ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮತ್ತು ಯಡಿಯೂರಪ್ಪ
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮತ್ತು ಯಡಿಯೂರಪ್ಪ

PFI ನಿಷೇಧ: ಡಿಕೆಶಿ ಸ್ವಾಗತ, SDPI ಕುರಿತು ಪ್ರಶ್ನೆ ಎತ್ತಿದ ಕಾಂಗ್ರೆಸ್, RSS ಕುರಿತ ಸಿದ್ದು ಹೇಳಿಕೆಗೆ ಬಿಎಸ್ ವೈ ಗರಂ

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್, SDPIನ ನಿಷೇಧವೇಕಿಲ್ಲ ಎಂದು ಪ್ರಶ್ನೆ ಮಾಡಿದ್ದು, ಮಾತ್ರವಲ್ಲದೇ PFI ಮತ್ತು SDPI ಸಂಘಟನೆಗಳು ಬಿಜೆಪಿ ಮತ್ತು RSS ನ B Team ಎಂದು ಕಿಡಿಕಾರಿದೆ.
Published on

ಬೆಂಗಳೂರು: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್, SDPIನ ನಿಷೇಧವೇಕಿಲ್ಲ ಎಂದು ಪ್ರಶ್ನೆ ಮಾಡಿದ್ದು, ಮಾತ್ರವಲ್ಲದೇ PFI ಮತ್ತು SDPI ಸಂಘಟನೆಗಳು ಬಿಜೆಪಿ ಮತ್ತು RSS ನ B Team ಎಂದು ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'PFI ಮಾತ್ರವಲ್ಲ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಎಲ್ಲಾ ಮೂಲಭೂತವಾದಿ, ಕೋಮುವಾದಿ ಸಂಘಟನೆಗಳನ್ನೂ ನಿಷೇಧಿಸಬೇಕು. PFI ಸಂಘಟನೆಯನ್ನು ಪೋಷಿಸಿಕೊಂಡು ಬಂದಿದ್ದು ಬಿಜೆಪಿಯೇ ಎಂದು ಸತ್ಯಜಿತ್ ಸುರತ್ಕಲ್ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಹೇಳಿದ್ದರು, ಆ ಬಗ್ಗೆಯೂ ತನಿಖೆಯಾಗಬೇಕು. PFI ಪೋಷಕರ ಬಗ್ಗೆ ಜಗತ್ತಿಗೆ ತಿಳಿಯಬೇಕು ಎಂದು ಹೇಳಿದೆ.

ಅಂತೆಯೇ 'PFI ಹಾಗೂ SDPI ಒಂದೇ ನಾಣ್ಯದ ಎರಡು ಮುಖಗಳಂತಿದ್ದವು, ಚುನಾವಣಾ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿರುವ SDPI ಸಂಘಟನೆಯ ಬಗ್ಗೆ ಚಕಾರ ಎತ್ತದಿರುವುದೇಕೆ ಬಿಜೆಪಿ ಸರ್ಕಾರ. SDPIಗೂ ಬಿಜೆಪಿಗೂ ಇರುವುದು "ಯಾವ ಜನ್ಮದ ಮೈತ್ರಿ"? PFI ಜೊತೆಗೆ ಇದ್ದ ಬಿಜೆಪಿಯ ಹೊಂದಾಣಿಕೆ ಎಂತದ್ದು? ಈ ಆಯಾಮದಲ್ಲಿ NIA ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದೆ.

ಸಿದ್ದು ಹೇಳಿಕೆಗೆ ಬಿಎಸ್ ವೈ ಗರಂ
ಇತ್ತ ಪಿಎಫ್ಐ ಬೆನ್ನಲ್ಲೇ ಸಮಾಜ ಹಾಳು ಮಾಡುತ್ತಿರುವ ಆರ್ ಎಸ್ಎಸ್ ಸಂಘಟನೆಯನ್ನೂ ನಿಷೇಧಿಸಬೇಕು ಎಂಬ ಮಾಜಿ ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಗರಂ ಆಗಿರುವ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, 'ಸಿದ್ದರಾಮಯ್ಯ ಯಾವಾಗಲೂ ಇಂತಂಹ ತಲೆತಿರುಕ ಮಾತುಗಳನ್ನೇ ಆಡುತ್ತಿರುತ್ತಾರೆ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಕಲ್ಪನೆಯನ್ನೇ ಇಟ್ಟುಕೊಳ್ಳದೆ ಮಾತನಾಡುತ್ತಾರೆ. RSS ಸಂಘಟನೆ ದೇಶಾದ್ಯಂತ ಹಿಂದೂಗಳನ್ನು ಸಂಘಟನೆ ಮಾಡುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಸಂಘಟನೆ ಕುರಿತು ದೇಶದ ಶೇ.90ರಷ್ಟು ಜನ ಅಭಿಮಾನ ಹೊಂದಿದ್ದಾರೆ. ಅಂತಹ ಸಂಘಟನೆ ಬಗ್ಗೆ ಹಗುರುವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಯೋಗ್ಯತೆ ಏನು ಎಂಬುದನ್ನು ತೋರಿಸುತ್ತದೆ. ಅವರು ಏನೇ ಮಾತನಾಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ರೀತಿ ಹಗುರವಾಗಿ ಮಾತನಾಡುವ ಮೂಲಕ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು: ಡಿಕೆಶಿ
ಪ್ರಚೋದನಕಾರಿ ಚಟುವಟಿಕೆಗೆ ಕಾರಣವಾಗುವ ಎಲ್ಲ ಸಂಘಟನೆಗಳನ್ನೂ ನಿಷೇಧಿಸಬೇಕು,.ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಇಂತಹುದೇ ಬೇಡಿಕೆಗಳನ್ನು ಇಟ್ಟಿದೆ. ಪಿಎಫ್ಐ ಆಗಲಿ ಅಥವಾ RSS ಆಗಲಿ.. ಸಮಾಜದ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು.. ಬೇರೆ ಸಮಾಜದವರ ಮನಸ್ಸನ್ನು ನೋಯಿಸುವಂತ ಸಂಘಟನೆಗಳನ್ನೂ ನಿಷೇಧಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com