ಸರ್ಕಾರದ ವಿರುದ್ಧ ಕಟ್ಟೆಯೊಡೆದ ಕಾರ್ಯಕರ್ತರ ಆಕ್ರೋಶ; ಬುಧವಾರ ಬೆಂಗಳೂರಿಗೆ ಅಮಿತ್ ಶಾ! ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ?

ಕೇಂದ್ರ ಗೃಹ  ಸಚಿವ ಅಮಿತ್‌ ಶಾ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೇಂದ್ರ ಸಾಂಸ್ಕೃತಿಕ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಆದರೂ, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ
ಅಮಿತ್ ಶಾ
ಅಮಿತ್ ಶಾ

ಬೆಂಗಳೂರು: ಕೇಂದ್ರ ಗೃಹ  ಸಚಿವ ಅಮಿತ್‌ ಶಾ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೇಂದ್ರ ಸಾಂಸ್ಕೃತಿಕ ಇಲಾಖೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಆದರೂ, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ

ಆಗಸ್ಟ್ 4ರಂದು ಗುರುವಾರ ರಾಜ್ಯ ರಾಜಧಾನಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಸಿಐಐಎನ ಸಾಸ್ಕೃತಿಕ ವಿಭಾಗದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ರಾತ್ರಿ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಆಗಮಿಸಲಿದ್ದಾರೆ ."ಗುರುವಾರ ಬೆಂಗಳೂರಿನ ಖಾಸಗಿ ಹೋಟಲ್‌ನಲ್ಲಿ ನಡೆಯಲಿರುವ 'ಸಂಕಲ್ಪದಿಂದ ಸಿದ್ಧಿ' (ಸಂಕಲ್ಪ್ ಸೇ ಸಿದ್ಧಿ) ಸಮಾವೇಶದ ಮೂರನೇ ಆವೃತ್ತಿಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಸಚಿವಾಲಯ ಮಾಹಿತಿ ಪ್ರಕಾರ, ಬುಧವಾರ ರಾತ್ರಿ 8 ಗಂಟೆಗೆ ವಿಮಾನ ಮೂಲಕ ಹೊರಟು ರಾತ್ರಿ ಸುಮಾರು 11ಗಂಟೆ ವೇಳೆಗೆ ಬೆಂಗಳೂರು ಎಚ್‌ಎಎಲ್ ಬಂದು ತಲುಪಲಿದ್ದಾರೆ. ನಂತರ ರೇರ್ಸ್‌ಕೋರ್ಸ್ ರಸ್ತೆಯ ತಾಜ್‌ವೆಸ್ಟೆಂಡ್‌ ನಲ್ಲಿ ತಂಗಲಿದ್ದಾರೆ. ಮರುದಿನ ಬೆಳಗ್ಗೆ 11ಗಂಟೆಯ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನದ 2.30 ರ ನಂತರ ದೆಹಲಿಗೆ ವಾಪಸ್‌ ಆಗಲಿದ್ದಾರೆ ಎಂಬ ಮಾಹಿತಿ ಇದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ನಂತರ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆದಿದೆ.  ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಅಮಿತ್ ಶಾ ಆಗಮನ ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಶಾ ಅವರ ಭೇಟಿಯು ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮತ್ತು ಪಕ್ಷವು ಅವರೊಂದಿಗಿದೆ ಎಂಬ ಸಂದೇಶವನ್ನು ರವಾನಿಸುವ ನಿರೀಕ್ಷೆಯಿದೆ. ಕೆಲವು ಸೂಚನೆಗಳನ್ನು ಸರ್ಕಾರಕ್ಕೂ ರವಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ನೆಟ್ಟಾರು ಹತ್ಯೆಯ ನಂತರ ಬಿಜೆವೈಎಂ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ಪಕ್ಷದ ವಿದ್ಯಾರ್ಥಿ ಘಟಕ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿರುವುದು 2023 ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವನ್ನು ಚಿಂತೆಗೀಡು ಮಾಡಿದೆ.

ಮೋದಿ ಬೆಂಬಲಿಗರಾಗಿರುವ ಚಕ್ರವರ್ತಿ ಸೂಲಿ ಬೆಲೆ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ., 23 ಹಿಂದೂ ಕಾರ್ಯಕರ್ತರ ಸಮಾಧಿಯಲ್ಲಿ ಅಧಿಕಾರದ ಮಹಲು ಕಟ್ಟಿದ್ದೀರಿ. ಭ್ರಷ್ಟಾಚಾರ ರಹಿತ ಸರ್ಕಾರವನ್ನು ಕೊಟ್ಟಿದ್ದಿದ್ದರೆ ಕಾರ್ಯಕರ್ತರು ಹೆಮ್ಮೆ ಪಡ್ತಾ ಇದ್ರು. ಅದನ್ನು ಮಾಡಿಲ್ಲ. ಹರ್ಷ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ಅಂದ್ರಿ. ಜೈಲಿನಲ್ಲಿ ಹಂತಕರಿಗೆ ಮೊಬೈಲ್ ಕೊಟ್ರಿ‌. 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತಾ ಲೇವಡಿ ಮಾಡಿದಾಗಲೂ ಸಮರ್ಥವಾಗಿ ಇದನ್ನು ತಳ್ಳಿ ಹಾಕಲು ನಿಮಗೆ ಒಬ್ಬರಿಗೂ ಧೈರ್ಯ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕರ್ತರ ಬಗ್ಗೆ ಲೇವಡಿ ಮಾಡುವ ನೀವು, ಆ ಕಾರ್ಯಕರ್ತನ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಅಸಾಧ್ಯ ಅಂತಾ ಅರ್ಥಮಾಡಿಕೊಳ್ಳಬೇಕು.  ಹಲಾಲ್ ಕಟ್, ಆಜಾನ್ ಹೋರಾಟ ಮಾಡಿದಾಗ ನೀವೇನ್ ಮಾಡಿದ್ರಿ? ಮೈಸೂರಿನಲ್ಲಿ ದೇವಸ್ಥಾನ ಒಡೆದಿದ್ದೆ ನಿಮ್ಮ ಸಾಧನೆಯೇ? ಕೊರೊನಾ ಸಂದರ್ಭದಲ್ಲಿ ಬೆಡ್, ಪಿಪಿಇ ಕಿಟ್‌ನಲ್ಲಿ ಜನರನ್ನು ಲೂಟಿ ಮಾಡಿದ್ರಿ. ಕಾರ್ಯಕರ್ತರಿಗೆ ಇದೆಲ್ಲವೂ ಗೊತ್ತಿಲ್ಲ ಅಂದುಕೊಂಡ್ರಾ? ಬಿಜೆಪಿ ಅಧಿಕಾರದ ಆಸೆಗೆ ಕೆಲ ಕಾಂಗ್ರೆಸ್ಸಿಗರನ್ನು ಪಕ್ಷದೊಳಗೆ ಸೇರ್ಪಡೆ ಮಾಡಿಕೊಂಡಿದೆ. ಭ್ರಷ್ಟಾಚಾರ, ಅಪ್ರಾಮಾಣಿಕತೆ ಸಿದ್ಧಾಂತಗಳಿಲ್ಲ. ಮೋದಿ ವಿರುದ್ಧದ ಸಿದ್ಧಾಂತಗಳಿರುವ ಹಾಗೂ ದರ್ಪ ತೋರುವ ಕಾರ್ಯಕರ್ತರನ್ನು ಹೊಂದಿರುವ ಕೆಲವರಿಗೆ ಸಚಿವರ ಹುದ್ದೆ ಕೊಟ್ಟಿದೆ. ಹೀಗಿರುವಾಗ ಕಾರ್ಯಕರ್ತರ ಪರಿಸ್ಥಿತಿ ಏನಾಗಿರಬೇಡ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಶಾ ಅವರ ಭೇಟಿಗೂ ರಾಜ್ಯದ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಮುಖ್ಯ ವಕ್ತಾರ ಎಂಜಿ ಮಹೇಶ್ ಹೇಳಿದ್ದಾರೆ.

ಅಷ್ಟೇ ಅಲ್ಲ, ಕಾರ್ಯಕರ್ತರ ಆಕ್ರೋಶವನ್ನೂ ಎದುರಿಸುತ್ತಿರುವ ಬಿಜೆಪಿ ಸರ್ಕಾರ ICU ಸೇರಿರುವುದಕ್ಕೆ ಅಮಿತ್ ಶಾ ಅವರು ಆತಂಕದಲ್ಲಿ ಓಡೋಡಿ ಬರುತ್ತಿದ್ದಾರಂತೆ. ಯಾರ ತಲೆದಂಡವಾಗಬಹುದು ,ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯಾಧ್ಯಕ್ಷ ಈ ಮೂವರಲ್ಲಿ ಯಾರ ಕುರ್ಚಿ ಕುಸಿಯಲಿದೆ? ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಧಿಡೀರ್ ಭೇಟಿ ಹಿಂದಿರುವ ಉದ್ದೇಶವೇನು? ಕಾನೂನು ಅವ್ಯವಸ್ಥೆಯನ್ನ ಕಣ್ತುಂಬಿಕೊಳ್ಳುವುದಕ್ಕೋ? ICU ನಲ್ಲಿರುವ ಬಿಜೆಪಿ ಕರ್ನಾಟಕ ಪಕ್ಷದ ಕೊನೆಯ ದರ್ಶನ ಮಾಡುವುದಕ್ಕೋ? ಬಿಜೆಪಿಗೆ ಇನ್ನಷ್ಟು 'ಶವ ರಾಜಕೀಯ'ದ ಟಾಸ್ಕ್ ಕೊಡುವುದಕ್ಕೋ? ಕದ್ದು ಮುಚ್ಚಿ ಆಗಮಿಸುತ್ತಿರುವುದರ ಹಿಂದಿನ ಅಜೆಂಡಾವೇನು? ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com