ಅಮಿತ್ ಶಾ ಭೇಟಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ಉಪಹಾರ ಸೇವನೆ; ಹೋಟೆಲ್ ಸುತ್ತ ಬಿಗಿ ಭದ್ರತೆ

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಅಮಿತ್​​ ಶಾ ಅವರು ಉಳಿದುಕೊಂಡಿರುವ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಭೇಟಿ ನೀಡಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿದ್ದಾರೆ. 
ಬಿ ಎಸ್ ಯಡಿಯೂರಪ್ಪ-ಅಮಿತ್ ಶಾ(ಸಂಗ್ರಹ ಚಿತ್ರ)
ಬಿ ಎಸ್ ಯಡಿಯೂರಪ್ಪ-ಅಮಿತ್ ಶಾ(ಸಂಗ್ರಹ ಚಿತ್ರ)

ಬೆಂಗಳೂರು: ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಪ್ರಯುಕ್ತ ಸಿದ್ದರಾಮೋತ್ಸವ ಏರ್ಪಡಿಸಿ ಲಕ್ಷಗಟ್ಟಲೆ ಜನರನ್ನು ಸೇರಿಸಿ ರಾಹುಲ್ ಗಾಂಧಿಯವರು ಬಂದು ಭಾಷಣ ಮಾಡಿದ್ದಾಗಿದೆ. ವೇದಿಕೆ ಮೇಲೆ ಸಿದ್ದು-ಡಿಕೆಶಿ ಆಲಿಂಗನ ಮಾಡಿ ಒಗ್ಗಟ್ಟಿನ ಮಂತ್ರ ಜಪಿಸಿ ವಿಧಾನಸಭೆ ಚುನಾವಣೆಗೆ ಮುನ್ನ ತಾವು ಒಗ್ಗಟ್ಟಿನಿಂದ ಇದ್ದೇವೆ ಎಂದು ಆಡಳಿತ ಪಕ್ಷಕ್ಕೆ, ರಾಜ್ಯದ ಜನತೆ ಮುಂದೆ ತೋರಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದಂತಿದೆ.

ಇದೀಗ ರಾಹುಲ್ ಗಾಂಧಿಯವರು ಬಂದು ಹೋದ ಮೇಲೆ ಬಿಜೆಪಿಯಲ್ಲಿ ಚಾಣಾಕ್ಯ ಎಂದೇ ಗುರುತಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಎಂಟ್ರಿಯಾಗಿದೆ. ಬೆಂಗಳೂರಿಗೆ ಕಳೆದ ರಾತ್ರಿ ಬಂದಿಳಿದ ಅಮಿತ್ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರು ಬರಮಾಡಿಕೊಂಡಿದ್ದಾರೆ. 

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಂತರ ತೀವ್ರ ಆಕ್ರೋಶಿತಗೊಂಡಿರುವ ಬಿಜೆಪಿ ಕಾರ್ಯಕರ್ತರು ಹಲವು ಜಿಲ್ಲೆಗಳಲ್ಲಿ ತಮ್ಮ ಸ್ಥಾನಗಳಿಗೆ ಸರಣಿ ರಾಜೀನಾಮೆ ಕೊಟ್ಟಿದ್ದರು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪಕ್ಷಕ್ಕೆ ಇದು ದೊಡ್ಡ ಹೊಡೆತವೇ. ಇಂತಹ ಸಂದರ್ಭದಲ್ಲಿ ಅಮಿತ್ ಶಾ ಅವರ ಆಗಮನವಾಗಿದ್ದು ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಯಾವ ರೀತಿಯ ಮಹತ್ವದ ಬದಲಾವಣೆ ಗಾಳಿ ಬೀಸಲಿದೆ ಎಂದು ನೋಡಬೇಕಿದೆ.

ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಅಮಿತ್​​ ಶಾ ಅವರು ಉಳಿದುಕೊಂಡಿರುವ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಭೇಟಿ ನೀಡಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿದ್ದಾರೆ. 

ಅಮಿತ್​ ಶಾ ಜತೆ ರಾಜ್ಯ ರಾಜಕಾರಣ ಕುರಿತು ಬಿಎಸ್​ವೈ ಚರ್ಚೆ ನಡೆಸಲಿದ್ದಾರೆ. ಶಿಕಾರಿಪುರ ಕ್ಷೇತ್ರಕ್ಕೆ ಸಂಬಂಧ ತಾವು ಕೈಗೊಂಡಿರುವ ತೀರ್ಮಾನ, ವಿಜಯೇಂದ್ರ ಸ್ಪರ್ಧೆ, ಸಿದ್ದರಾಮಯ್ಯ ಅಮೃತ ಮಹೋತ್ಸವ ಕುರಿತು ಚರ್ಚೆ ನಡೆಸಲಿದ್ದು, ವಿಧಾನಸಭೆ ಚುನಾವಣೆಗೆ ಮುನ್ನ ಸರ್ಕಾರದ ವರ್ಚಸ್ಸು ಹೆಚ್ಚಳ, ಪಕ್ಷ ಸಂಘಟನೆ, ಚುನಾವಣೆಗೆ ತಯಾರಿ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಹೊಟೇಲ್ ಸುತ್ತ ತೀವ್ರ ಭದ್ರತೆ: ರಾಜ್ಯಕ್ಕೆ ಅಮಿತ್​​ ಶಾ ಭೇಟಿ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಅಲರ್ಟ್​ ಘೋಷಿಸಲಾಗಿದ್ದು, ಪೊಲೀಸರು ಅಮಿತ್ ಶಾಗೆ ಭಾರೀ ಭದ್ರತೆ ಕಲ್ಪಿಸಿದ್ಧಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಯಾವುದೇ ಪ್ರತಿಭಟನೆ, ಧರಣಿ ಬಿಸಿ ತಟ್ಟದಂತೆ ಅಲರ್ಟ್​ ಮಾಡಲಾಗಿದೆ.

ಇತ್ತೀಚೆಗಷ್ಟೇ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಕಾರ್ಯಕರ್ತರು ನುಗ್ಗಿದ್ದರು. ಅಂತಹ ಲೋಪ ಆಗದಂತೆ ಬೆಂಗಳೂರು ಪೊಲೀಸರು ಎಚ್ಚರಿಕೆ ವಹಿಸಿದ್ಧಾರೆ. ಅಮಿತ್​ ಶಾಗೆ ಝಡ್​ ಪ್ಲಸ್ ಭದ್ರತೆ ಇದ್ದರೂ ಹೆಚ್ಚಿನ ಬಂದೋಬಸ್ತ್​​ ಮಾಡಲಾಗಿದೆ.
ತಾಜ್ ವೆಸ್ಟ್ಎಂಡ್​ ಸುತ್ತಮುತ್ತ ಭಾರೀ ಪೊಲೀಸ್​ ಭದ್ರತೆ ಮಾಡಲಾಗಿದೆ. 2, 500ಕ್ಕೂ ಹೆಚ್ಚು ಪೊಲೀಸರು ಅಮಿತ್​ ಶಾ ಬಂದೋಬಸ್ತ್​ಗೆ ನಿಯೋಜನೆ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com