ಅಮಿತ್ ಶಾ ಜತೆ ಸಿಎಂ ಬೊಮ್ಮಾಯಿ ಹಾಗೂ ಇತರ ನಾಯಕರು
ಅಮಿತ್ ಶಾ ಜತೆ ಸಿಎಂ ಬೊಮ್ಮಾಯಿ ಹಾಗೂ ಇತರ ನಾಯಕರು

ಕರ್ನಾಟಕಕ್ಕೆ ನೂತನ ಮುಖ್ಯಸ್ಥರ ನೇಮಕ ಸುಳಿವು ನೀಡಿದ ಅಮಿತ್ ಶಾ, ಕಾನೂನು ಸುವ್ಯವಸ್ಥೆ ಬಗ್ಗೆ ಬಿಜೆಪಿ ನಾಯಕರಿಗೆ ತರಾಟೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಬೆಂಗಳೂರು ಭೇಟಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವ ಸುಳಿವು ನೀಡಿದ್ದು, ಸಚಿವ ವಿ ಸುನೀಲ್ ಕುಮಾರ್ ಅವರನ್ನು ನೂತನ
Published on

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಬೆಂಗಳೂರು ಭೇಟಿ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವ ಸುಳಿವು ನೀಡಿದ್ದು, ಸಚಿವ ವಿ ಸುನೀಲ್ ಕುಮಾರ್ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಯಿದೆ. 

ಮೂಲಗಳ ಪ್ರಕಾರ, 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಅವಕಾಶಗಳ ಕುರಿತು ಅಮಿತ್ ಶಾ ವರದಿ ಪಡೆದಿದ್ದು, ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಕರ್ನಾಟಕ, ವಿಶೇಷವಾಗಿ ಕರಾವಳಿ ಪ್ರದೇಶದ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಜೆಪಿ ಹೊಂದಿರುವ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಠಿಣ ಸವಾಲು ಎದುರಿಸಬಹುದು ಎಂದು ಸಮೀಕ್ಷೆಯ ವರದಿ ಹೇಳಿರುವುದರಿಂದ, ಹಿಂದುಳಿದ ಬಿಲ್ಲವ ನಾಯಕ ಸುನೀಲ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಆರ್‌ಎಸ್‌ಎಸ್ ಸೂಚಿಸಿದೆ ಎನ್ನಲಾಗಿದೆ.

ಕಾಂಗ್ರೆಸ್ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಬಿಲ್ಲವ ಸಮುದಾಯದ ಮತ ಬ್ಯಾಂಕ್‌ನತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. 

ಇದೀಗ ಕಾಂಗ್ರೆಸ್ ತಂತ್ರಕ್ಕೆ ಪ್ರತಿಯಾಗಿ ಸುನೀಲ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಒಕ್ಕಲಿಗರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆಯೂ ಚರ್ಚಿಸಲಾಯಿತು. ಆದರೆ ಅದು ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ನಾಯಕರಿಗೆ ಮನವರಿಕೆಯಾಗಲಿಲ್ಲ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಹೆಸರುಗಳೂ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬಂದವು.

ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅಮಿತ್ ಶಾ ಮಾತುಕತೆ ನಡೆಸಿದ್ದು, 2023ರ ವಿಧಾನಸಭೆ ಚುನಾವಣೆ ಎದುರಿಸಲು ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಇತ್ತೀಚಿನ ಘಟನೆಗಳು ವಿಶೇಷವಾಗಿ ಬೊಮ್ಮಾಯಿ ಸರ್ಕಾರದ ವಿರುದ್ಧ ಪಕ್ಷದ ಕಾರ್ಯಕರ್ತರ ಆಕ್ರೋಶ ಮತ್ತು ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಯ ಬಗ್ಗೆ ಅಮಿತ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡದಲ್ಲಿ ಮೂರು ಕೊಲೆಗಳು ನಡೆದಿದ್ದಕ್ಕೆ ಮತ್ತು ಕರಾವಳಿ ಕರ್ನಾಟಕದ ಕಾನೂನು ಸುವ್ಯವಸ್ಥೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಅಮಿತ್ ಶಾ ತೀವ್ರ ತರಾಟೆಗೆ ತೆಗೆದುಕೊಂಡರು. ಕಟೀಲ್ ಅವರು ಬುಧವಾರ ಸಂಜೆ ಅಮಿತ್ ಶಾ ಅವರಿಗೆ ದೂರವಾಣಿ ಮೂಲಕ ಪರಿಸ್ಥಿತಿಯನ್ನು ವಿವರಿಸಿದ್ದು ಮತ್ತು ಬೆಳಗ್ಗೆ ಮತ್ತೆ ಅವರೊಂದಿಗೆ ಮಾತನಾಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com