ವಿಧಾನಸಭೆ ಚುನಾವಣೆ: ಪ್ರತಿ ಕ್ಷೇತ್ರಕ್ಕೆ 3 ಅಭ್ಯರ್ಥಿಗಳ ಆಯ್ಕೆ ; ಗೆಲ್ಲುವ ಅಭ್ಯರ್ಥಿಗಳಿಗೆ ಮಾನದಂಡ- ಕಾಂಗ್ರೆಸ್ ಹೊಸ ಲೆಕ್ಕಾಚಾರ!   

2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಪಿಸಿಸಿ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಪಿಸಿಸಿ ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ, ಗೆಲ್ಲುವ ಸಾಮರ್ಥ್ಯ, ಪಕ್ಷದಲ್ಲಿನ ಹಿರಿತನ, ಚುನಾವಣೆಗೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಸಾಮರ್ಥ್ಯ ಮತ್ತು ಕ್ಷೇತ್ರದಲ್ಲಿನ ಜನಪ್ರಿಯತೆ ಪ್ರಮುಖವಾಗಿವೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಟಿಕೆಟ್ ಆಕಾಂಕ್ಷಿಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 1-3 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಮತ್ತು ಪಟ್ಟಿಯನ್ನು ಕಳುಹಿಸಲು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುವ ಸಮಿತಿಗಳನ್ನು ರಚಿಸಿದ್ದಾರೆ.

ಜಿಲ್ಲಾ ಚುನಾವಣಾ ಸಮಿತಿಯು ಜಿಲ್ಲೆಯ ಮಂಚೂಣಿ ಘಟಕಗಳ, ವಿಭಾಗಗಳ ಮತ್ತು ಸೆಲ್‌ಗಳ ಅಧ್ಯಕ್ಷರುಗಳ ಜೊತೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಸ್ಥಳೀಯ ಜನತೆಯ ವಿಶ್ವಾಸವನ್ನು ಹೊಂದಿರುವ ಮತ್ತು ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿರುವ ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲು ತಿಳಿಸಲಾಗಿದೆ.

ಸಮಿತಿಯ ಸದಸ್ಯರು ತಮ್ಮ ತಮ್ಮ ಜಿಲ್ಲೆಗಳಲ್ಲಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಿರ್ಣಯಿಸಿ, ಎಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸರ್ವಾನುಮತದ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕು ಎಂದು ಶಿವಕುಮಾರ್ ಹೇಳಿದರು. ಆಕಾಂಕ್ಷಿಗಳ ನಡುವೆ ಭಿನ್ನಾಭಿಪ್ರಾಯಗಳಿದ್ದಲ್ಲಿ ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರ ನೆರವು ಪಡೆದು ಸಮಸ್ಯೆ ಬಗೆಹರಿಸುವಂತೆ ಸಮಿತಿ ಸದಸ್ಯರಿಗೆ ಸೂಚಿಸಲಾಗಿದೆ.

ನಾಯಕರ ನಿವಾಸಗಳಲ್ಲಿ ಸಭೆ ನಡೆಸದಂತೆ ಹಾಗೂ ರೆಕಾರ್ಡಿಂಗ್ ಗೆ ಅವಕಾಶ ನೀಡದಂತೆ ಸಮಿತಿ ಸದಸ್ಯರಿಗೆ ಸೂಚಿಸಿದರು. ಸಭೆಯ ಚರ್ಚೆಗಳ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆಗಳನ್ನು ನೀಡದಂತೆ ಅವರಿಗೆ ನಿರ್ದೇಶನ ನೀಡಲಾಗಿದೆ.

ಯಾವುದೇ ಸಮಾಜ ವಿರೋಧಿ ಚಟುವಟಿಕೆಗಳು ಅಥವಾ ಕೋಮುವಾದಿ ಕೃತ್ಯಗಳಲ್ಲಿ ತೊಡಗಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಸಮಿತಿಯ ಸದಸ್ಯರಿಗೆ ತಕ್ಷಣವೇ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ ಮತ್ತು ಜನವರಿ 1, 2023 ರ ಮೊದಲು ಆಯ್ಕೆಯಾದ ಹೆಸರುಗಳನ್ನು ಕೆಪಿಸಿಸಿಗೆ ಕಳುಹಿಸಲು ಸೂಚಿಸಲಾಗಿದೆ.

ಬೆಂಗಳೂರು ಸಿಟಿ ಸೆಂಟ್ರಲ್‌ನಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಿತಿಯ ಉಸ್ತುವಾರಿಯನ್ನು ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಅವರು ವಹಿಸಲಿದ್ದಾರೆ, ಮಾಜಿ ಸಿಎಂ ಎಂ ವೀರಪ್ಪ ಮೊಯ್ಲಿ ಕೋಲಾರದಲ್ಲಿ ಮತ್ತು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ತುಮಕೂರಿನಲ್ಲಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com