ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿದೆ ಭಾರತ್‌ ಜೋಡೋ ಅಭಿಯಾನ ಮತ್ತು ಸಿದ್ದರಾಮೋತ್ಸವ: ನಕಲಿ ಗಾಂಧಿಗಳಿಗೀಗ ಇತ್ತ ದರಿ, ಅತ್ತ ಪುಲಿ!

ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ, ಮನೆಯೊಳಗಿದ್ದವರು ಗುಳೆ ಹೊರಡಲನುವಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಲೇವಡಿ ಮಾಡಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು: ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ, ಮನೆಯೊಳಗಿದ್ದವರು ಗುಳೆ ಹೊರಡಲನುವಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ., ಅಕ್ಟೋಬರ್ ತಿಂಗಳಲ್ಲಿ ನಡೆಲಿರುವ ಭಾರತ್ ಜೋಡೋ ಕಾರ್ಯಕ್ರಮಕ್ಕೂ ನಾಯಕರು ಸಿಗಲಾರದಷ್ಟು ಕಾಂಗ್ರೆಸ್‌ ಖಾಲಿಯಾಗಲಿದೆ, ಭಾರತ್‌ ಜೋಡೋ ಅಭಿಯಾನ ಮತ್ತು ಸಿದ್ದರಾಮೋತ್ಸವ! ಈ ಎರಡು ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿದೆ. ಕಾಂಗ್ರೆಸ್‌ಛೋಡೋಯಾತ್ರೆ ಎಂದು ಬಿಜೆಪಿ ಗೇಲಿ ಮಾಡಿದೆ.

ರಾಜ್ಯದಲ್ಲಿ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ರಾಹುಲ್ ಗಾಂಧಿಯವರೊಂದಿಗೆ ಸಿದ್ದರಾಮಯ್ಯ ಬಣ ಪಾದಯಾತ್ರೆ ಮಾಡುತ್ತೋ ಅಥವಾ ಡಿಕೆಶಿ ಬಣವೋ? ವಿದೇಶದಲ್ಲೇ ಹೆಚ್ಚು ಕಾಲ ಕಳೆಯುವ ರಾಹುಲ್ ಗಾಂಧಿ ಅವರನ್ನು ಈ ಇಬ್ಬರು ನಾಯಕರು ಸೇರಿ ದಾರಿ ತಪ್ಪಿಸುತ್ತಾರೆ. ಎಷ್ಟಾದರೂ ಈ ಇಬ್ಬರು ನಾಯಕರ ದಾರಿಯೂ ಬೇರೆ ಬೇರೆ ಅಲ್ಲವೇ ಎಂದು ಪ್ರಶ್ನಿಸಿದೆ.

ಪ್ರತಿಯೊಂದಕ್ಕೂ ಲೆಕ್ಕ ಕೇಳುವ ರಾಜ್ಯ ಕಾಂಗ್ರೆಸ್ ನಾಯಕರೇ, ಭಾರತ್ ಜೋಡೋ ಅಭಿಯಾನ ಘೋಷಣೆಯಾದ ನಂತರ ಭಾರತೀಯ ಕಾಂಗ್ರೆಸ್  ಚೋಡೋ ಅಭಿಯಾನದಲ್ಲಿ ಕಾಂಗ್ರೆಸ್ ತ್ಯಜಿಸಿದವರ ಸಂಖ್ಯೆ ಎಷ್ಟು? ಭಾರತ್ ಜೋಡೋ ಅಭಿಯಾನದ ಅಂಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಉದ್ದೇಶಿಸಿರುವ ರಾಹುಲ್ ಗಾಂಧಿ ಅವರೇ, ಭಾರತ ಈಗ ಮತ್ತಷ್ಟು ಬಲಿಷ್ಠವಾಗಿದೆ. ಮುರಿದು ಹೋಗಿರುವುದು ಕಾಂಗ್ರೆಸ್ ಪಕ್ಷ, ಮೊದಲು ಕಾಂಗ್ರೆಸ್ ಜೋಡೋ ಅಭಿಯಾನ ಮಾಡಿ. ಮುಂದೊಂದು ದಿನ ಕಾಂಗ್ರೆಸ್‌ ಪಕ್ಷದ ಬಾಗಿಲು ಮುಚ್ಚಲೂ ಹಿಂಬಾಲಕರು ಸಿಗಲಾರರು ಎಂದಿದೆ.

ಸಿದ್ದರಾಮೋತ್ಸವದಿಂದ ಎರಡರಲ್ಲಿ ಯಾವುದಾದರೂ ಒಂದು ನಿಶ್ಚಿತ! ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಡಿಕೆಶಿ ಪಕ್ಷ ಒಡೆಯುತ್ತಾರೆ. ನಕಲಿ ಗಾಂಧಿಗಳಿಗೀಗ ಇತ್ತ ದರಿ, ಅತ್ತ ಪುಲಿ ಗಾದೆಯ ಅನುಭವ!

ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಈಗ ತನ್ನದೇ ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ನಡೆಯುವ ವ್ಯಕ್ತಿ‌ಪೂಜೆಗೆ ರಾಹುಲ್ ಗಾಂಧಿ ಮುಖ್ಯ ಅತಿಥಿಯಂತೆ, ಹೈಕಮಾಂಡ್‌ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಡಿಕೆಶಿ ತಯಾರಿಸಿದ ಊಟವನ್ನು ಸಿದ್ದರಾಮಯ್ಯಗೆ ಬಡಿಸುವ ಹುನ್ನಾರವೇ ಇದು? ಎಂದು ಬಿಜೆಪಿ ಟೀಕಿಸಿದೆ.

ಒಡೆದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಒಡೆದೇ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್   ಹಾಗೂ ವಿಪಕ್ಷ ನಾಯಕ  ಸಿದ್ದರಾಮಯ್ಯ ಅವರದು ಎಂದೂ ಒಂದಾಗದ ಒಡಕು ಮನಸು. ಬ್ರೇಕ್ ಪಾಸ್ಟ್ ಮೀಟಿಂಗ್‌ನಿಂದ ಇದೆಲ್ಲ ಸರಿ ಹೋಗುವ ಮಾತೇ? ಒಡಕು ಕನ್ನಡಿ, ಮಸುಕು ಪ್ರತಿಬಿಂಬ! ಎಂದು ಟಾಂಗ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com