ಬಿಜೆಪಿ ಚಿಂತನ-ಮಂಥನ: ಮುಂದಿನ ಚುನಾವಣೆಗೆ ಕಮಲಪಡೆ ಕಾರ್ಯತಂತ್ರ; ಸಮುದಾಯಗಳನ್ನು ಸೆಳೆಯಲು ಕಸರತ್ತು

2023ರ ವಿಧಾನಸಭಾ ಚುನಾವಣೆಯಲ್ಲಿ  ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.
ಬಿಜೆಪಿ ಮುಖಂಡರ ಸಭೆ
ಬಿಜೆಪಿ ಮುಖಂಡರ ಸಭೆ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.

ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೇರ್ ನ ರೆಸಾರ್ಟ್‌ನ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್ ನಲ್ಲಿ ಬಿಜೆಪಿ ಚಿಂತನ ಮಂತನ ಸಭೆ ನಡೆಯಿತು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮಾಡಬೇಕಾದ ಕಾರ್ಯತಂತ್ರಗಳ ಕುರಿತು ವಿವಿಧ ಆಯಾಮಗಳಲ್ಲಿ ಸುದೀರ್ಘ ಚರ್ಚೆಯಾಗಿದ್ದು, ಪ್ರಸ್ತುತ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅಭಿಪ್ರಾಯ ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಇರುವ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ.

ಕೋರ್ ಕಮಿಟಿ ಸಭೆಯಲ್ಲಿ ಪಕ್ಷವು ಯಾವಯಾವ ಜಿಲ್ಲೆಗಳಲ್ಲಿ ಸಂಘಟನೆಯ ಕೊರತೆ ಎದುರಿಸುತ್ತಿದೆಯೋ ಅಂತಹ ಕಡೆ ಮತ್ತಷ್ಟು ಬಲಪಡಿಸುವ ಕುರಿತು ಸಲಹೆಗಳನ್ನು ನೀಡಲಾಗಿದೆ. ಎರಡನೇ ಹಂತದಲ್ಲಿ ಸಚಿವರ ಸಭೆಯಲ್ಲಿ ಸಚಿವರುಗಳ ವರ್ಷದ ಸಾಧನೆ, ಇಲಾಖೆಯಲ್ಲಿನ ಪ್ರಗತಿ, ಹಾಗೂ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಸಚಿವರ ಕೊಡುಗೆ, ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಂಡಿರುವುದು, ಅವರ ಜನಪ್ರಿಯತೆ ಕುರಿತು ಸಮಾಲೋಚನೆ ನಡೆಸಲಾಗಿದೆ.

ಸಚಿವರುಗಳ ಕಾರ್ಯವೈಖರಿಯ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಇರುವ ಮಾಹಿತಿ ಹಾಗೂ ಅವರ ಬಗ್ಗೆ ಇರುವ ಆರೋಪಗಳ ಬಗ್ಗೆ ಪಕ್ಷದ ರಾಷ್ಟ್ರೀಯ  ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಚಿವರ ಗಮನಕ್ಕೆ ತಂದಿದ್ದು ಉಳಿದ ಅವಧಿಯಲ್ಲಿ ಪಕ್ಷ ಸಂಘಟನೆ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಮುದಾಯಗಳ ಸೆಳೆಯಲು ತಂತ್ರ:

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಲು ಚಿಂತನೆ ನಡೆಸಿದ್ದು, ಮೇಲ್ವರ್ಗದ ಜನರ ಪಕ್ಷ ಎನ್ನುವ ಬಿಜೆಪಿಯ ಬಗ್ಗೆ ಇರುವ ಸಾರ್ವಜನಿಕರ ಅಭಿಪ್ರಾಯವನ್ನು ಬದಲಾಯಿಸಲು ದಲಿತರು, ಹಿಂದುಳಿದವರು, ರೈತರು ಮತ್ತು ಕಾರ್ಮಿಕ ವರ್ಗದವರಿಗೆ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಆಯಾ ಸಮುದಾಯಗಳ ಜನರಿಗೆ ತಲುಪಿಸಿ ಮನವರಿಕೆ ಮಾಡುವ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಸರ್ಕಾರದ ಫಲಾನುಭವಿಗಳಾಗಿರುವ ಸಮುದಾಯಗಳ ಪ್ರತ್ಯೇಕ ಸಮಾವೇಶಗಳನ್ನು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ದುರ್ಬಲ ಪ್ರದೇಶದಲ್ಲಿ ಬಲ ಪಡಿಸುವುದು:

ಬಿಜೆಪಿ ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಬಲಗೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಕಡೆ ಒಲವಿರುವ ಮುಖಂಡರನ್ನು ಬಿಜೆಪಿಯ ಕಡೆಗೆ ಸೆಳೆಯುವ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಿರುವ ಶಾಸಕರ ಸಂಖ್ಯೆಯನ್ನು ಎರಡರಷ್ಟು ಹೆಚ್ಚಿಸಲು ಆ ಭಾಗಕ್ಕೆ ಒಬ್ಬರು ಹಿರಿಯ ನಾಯಕರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಸರ್ಕಾರದ ಮೇಲೆ ಕೇಳಿ ಬಂದಿರುವ ಗಂಭೀರ ಆರೋಪಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಪ್ರತಿ ಪಕ್ಷ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಪತ್ಯುತ್ತರ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಪಕ್ಷ ಸಂಘಟನೆ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸುವ ಯೋಜನೆಗಳನ್ನು ಅನುಷ್ಟಾನ ಮಾಡಬೇಕೆಂದು ಸಂಘ ಪರಿವಾರದ ಹಿರಿಯ ನಾಯಕರು ಸಲಹೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com