ತೆರಿಗೆ ಹಣ ಕಕ್ಕಿಸಲು ಆಗದ ಪ್ರಧಾನಿ ಬಡವರ ಹೊಟ್ಟೆ ಬಗೆಯಲು ಹೊರಟಿರುವುದು ದುರಂತ; ಫ್ಯಾಸಿಸ್ಟ್ ಮನಸ್ಸಿನ ಕ್ರೌರ್ಯ: ಸಿದ್ದರಾಮಯ್ಯ

ತೆರಿಗೆ ವಂಚನೆ ಮಾಡಿ, ಬ್ಯಾಂಕ್ ಮುಳುಗಿಸಿ ಓಡಿಹೋಗಿರುವ ಮೋದಿ, ಮಲ್ಯಗಳು ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಅವರನ್ನು ಎಳೆದುಕೊಂಡು ಬಂದು, ವಂಚಿಸಿದ್ದ ತೆರಿಗೆ ಹಣವನ್ನು ಕಕ್ಕಿಸಲು ಆಗದ 56 ಎದೆಯಳತೆಯ ಪ್ರಧಾನಿಗಳು ಬಡವರ ಹೊಟ್ಟೆ ಬಗೆಯಲು ಹೊರಟಿರುವುದು ದುರಂತ.
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ಬಡವರ ಹೊಟ್ಟೆಗೆ ಒದೆಯುವುದೇ ಅಚ್ಚೇ ದಿನ್ ಎಂದು ತಿಳಿದುಕೊಂಡಿರುವ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಮಂಡಕ್ಕಿ ಎಲ್ಲವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಬಡವರ ಹತ್ಯೆಗೆ ಸಮನಾದ ಪಾಪ ಕರ್ಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿರುವ ಸಿದ್ದರಾಮಯ್ಯ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದಿಂದ ತರಕಾರಿ ಮತ್ತಿತರ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ, ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿದಿದೆ. ಈ ಹೊತ್ತಿನಲ್ಲಿ ಬಡವರ ನೆರವಿಗೆ ಬರಬೇಕಾಗಿರುವ ಕೇಂದ್ರ ಸರ್ಕಾರ ಅವರನ್ನು ಉಪವಾಸ ಬೀಳಿಸಿ, ಸಾಯಿಸಲು ಹೊರಟಿದೆ. ಇಂತಹ ಕ್ರೌರ್ಯ ಫ್ಯಾಸಿಸ್ಟ್ ಮನಸ್ಸುಗಳಿಗೆ ಮಾತ್ರ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರ್ಯಾಂಡೆಡ್ ಅಲ್ಲದ ಪ್ಯಾಕ್ ಮಾಡಲಾಗಿರುವ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ವಸ್ತುಗಳ ಮೇಲೆ ನರೇಂದ್ರ ಮೋದಿ ಸರ್ಕಾರ ಜಿಎಸ್‌ಟಿ ಹೇರಿರುವುದು ಬ್ರ್ಯಾಂಡೆಡ್ ವಸ್ತುಗಳ ಕಂಪೆನಿಗಳ ಒತ್ತಡಕ್ಕೆ ಮಣಿದು ಎನ್ನುವುದು ಸ್ಪಷ್ಟ. ತಮ್ಮದು ಸೂಟ್ ಬೂಟ್ ಸರ್ಕಾರ ಎನ್ನುವುದನ್ನು ನರೇಂದ್ರ ಮೋದಿ ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ.

ತೆರಿಗೆ ವಂಚನೆ ಮಾಡಿ, ಬ್ಯಾಂಕ್ ಮುಳುಗಿಸಿ ಓಡಿಹೋಗಿರುವ ಮೋದಿ, ಮಲ್ಯಗಳು ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಅವರನ್ನು ಎಳೆದುಕೊಂಡು ಬಂದು, ವಂಚಿಸಿದ್ದ ತೆರಿಗೆ ಹಣವನ್ನು ಕಕ್ಕಿಸಲು ಆಗದ 56 ಎದೆಯಳತೆಯ ಪ್ರಧಾನಿಗಳು ಬಡವರ ಹೊಟ್ಟೆ ಬಗೆಯಲು ಹೊರಟಿರುವುದು ದುರಂತ ಎಂದಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಈ ‘ತೆರಿಗೆ ಭಯೋತ್ಪಾದನೆಗೆ ಬಲಿಯಾಗಿರುವುದು ವಿರೋಧಪಕ್ಷಗಳ ಮತದಾರರು ಮಾತ್ರವಲ್ಲ, ಅಚ್ಚೇ ದಿನಗಳ ನಿರೀಕ್ಷೆಯಿಟ್ಟುಕೊಂಡು ಬಿಜೆಪಿಯನ್ನು ಗೆಲ್ಲಿಸಿದ್ದ ಬಿಜೆಪಿಯ ಮತದಾರರಿಗೂ ಇದರಲ್ಲಿ ರಿಯಾಯಿತಿ-ವಿನಾಯಿತಿ ಏನಿಲ್ಲ. ಅವರು ಕೂಡಾ ಇದಕ್ಕೆ ಬಲಿಯಾಗಿದ್ದಾರೆ. ಬಡತನ ಎನ್ನುವುದು ಜಾತಿ, ಧರ್ಮ, ಪಕ್ಷ ಮೀರಿರುವ ಪ್ರಶ್ನೆ.

ಬ್ರ್ಯಾಂಡ್ ಗಳ ಬೆನ್ನತ್ತಿ ಹೋಗುತ್ತಿರುವ ಉಳ್ಳವರು, ಶ್ರೀಮಂತರು ಖರೀದಿಸುವ ವಸ್ತುಗಳ ಮೇಲೆ ತೆರಿಗೆ ಹೇರಿಕೆಗೆ ಕನಿಷ್ಠ ಸಮರ್ಥನೆ ಇದೆ. ಆದರೆ ಗುಡಿಕೈಗಾರಿಕೆಗಳ ರೂಪದಲ್ಲಿ ಅಕ್ಕಿ, ಗೋಧಿ, ಹಾಲು, ಮೊಸರು ಮತ್ತಿತರ ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಲಕ್ಷಾಂತರ ಕಿರುಉದ್ಯಮಿಗಳಿಗೂ ಕೂಡಾ ಇದೊಂದು ದೊಡ್ಡ ಹೊಡೆತ.  

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಾವು-ಬದುಕಿನ ಪ್ರಶ್ನೆಯನ್ನು ದೇಶದ ಜನರ ಮುಂದಿಟ್ಟಿದೆ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಅನಾಚಾರಗಳನ್ನೆಲ್ಲ ಸಹಿಸಿಕೊಂಡು ಇನ್ನೂ ಅಚ್ಚೇ ದಿನಗಳ ಕನಸು ಕಂಡರೆ ಬದುಕಿನ ನಾಶ ಖಂಡಿತ.  ಕಾಲ ಮಿರಿಹೋಗುತ್ತಿದೆ, ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com