ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಇ.ಡಿ ಕಿರುಕುಳ: ಜುಲೈ 21 ರಂದು ರಾಜಭವನ ಚಲೋ ಪ್ರತಿಭಟನೆ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಹೆಸರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ದುರುಪಯೋಗ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲು ಮುಂದಾಗಿದೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಹೆಸರಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ದುರುಪಯೋಗ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಕಿರುಕುಳ ನೀಡಲು ಮುಂದಾಗಿದೆ, ಇದನ್ನು ಖಂಡಿಸಿ ಜು.21ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ಜಾಥಾ ಹಾಗೂ ‘ರಾಜಭವನ ಮುತ್ತಿಗೆ’ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರು ಶನಿವಾರ ಸಂಜೆ ಪಕ್ಷದ ಶಾಸಕರು, ಮಾಜಿ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಗೂ ಇತರ ಮುಖಂಡರು ಸೇರಿದಂತೆ 600ಕ್ಕೂ ಹೆಚ್ಚು ನಾಯಕರ ಜತೆ ‘ಜೂಮ್‌’ ಸಭೆ ನಡೆಸಿ ಚರ್ಚಿಸಿದ್ದಾರೆ.

ಈ ಸಭೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಧೈರ್ಯ ತುಂಬಲು ಜು.21 ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಜು.21 ರಂದು ಎಲ್ಲಾ ನಾಯಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೇರಿ ಅಲ್ಲಿಂದ ‘ರಾಜಭವನ ಚಲೋ’ ನಡೆಸಲಾಗುವುದು ಎಂದರು.

ನಾವು ಯಾವುದೇ ಕಾರಣಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ಫ್ರೀಡಂಪಾರ್ಕ್​ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ. ಜು.22ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುಹುದು. ಸೋನಿಯಾ ಗಾಂಧಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.ಈ ವೇಳೆ ಎಲ್ಲಾ ಶಾಸಕರು, ನಾಯಕರು ಕಡ್ಡಾಯವಾಗಿ ಭಾಗವಹಿಸಬೇಕು. ನಾನು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಭಾಗವಹಿಸುತ್ತೇವೆ. ನಮ್ಮನ್ನು ಬಂಧಿಸಿದರೂ ಹೆದರದೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಕಳೆದ ತಿಂಗಳು ಐದು ದಿನಗಳ ಕಾಲ ಸುಮಾರು 50 ಗಂಟೆ ರಾಹುಲ್‌ಗಾಂಧಿ ಅವರನ್ನು ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡಲಾಯಿತು. ಇ.ಡಿ. ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷ ಹಾಗೂ ನಾಯಕರ ಘನತೆಗೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಬಲ ಸಂದೇಶ ರವಾನಿಸಬೇಕು ಎಂದು ಹೇಳಿದರು.

ಪ್ರಕರಣದ ಬಗ್ಗೆ ಮಾತನಾಡಿದ ಅವರು, ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಯಾವುದೇ ಹುರಳಿಲ್ಲ ಎಂದು ಬಿಜೆಪಿಯವರಿಗೆ ತಿಳಿದಿದೆ. ಸ್ವತಃ ಅರುಣ್‌ ಜೇಟ್ಲಿ ಅವರೇ ಸಂಸತ್ತಿನಲ್ಲಿ ಈ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದರು. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನ್ಯಾಷನಲ್‌ ಹೆರಾಲ್ಡ್‌ ಆಸ್ತಿಯನ್ನು ತಮ್ಮ ಆಸ್ತಿ ಎಂದು ಹೇಳಿಕೊಂಡಿದ್ದಾರಾ? ನಾನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸ್ಥೆಗಳ ಜವಾಬ್ದಾರಿ ನನ್ನ ಮೇಲಿರುತ್ತದೆ.

ಹಾಗೆಂದು ಪಕ್ಷದ ಆಸ್ತಿಯೆಲ್ಲ ನನ್ನದು ಎಂದು ಹೇಳಲು ಸಾಧ್ಯವೇ? ಎಂದು ಕಿಡಿ ಕಾರಿದರು. ಖಾಸಗಿ ಕಂಪನಿಗಳೇ ಬೇರೆ, ಚಾರಿಟೇಬಲ್‌ ಟ್ರಸ್ಟ್‌ಗಳ ವತಿಯಿಂದ ನಡೆಯುವ ಸಂಸ್ಥೆಗಳೇ ಬೇರೆ. ಟ್ರಸ್ಟ್‌ಗಳ ವತಿಯಿಂದ ನಡೆಯುವ ಸಂಸ್ಥೆಗಳ ಜವಾಬ್ದಾರಿ ಆ ಟ್ರಸ್ಟ್‌ನ ಮುಖ್ಯಸ್ಥರು ಬದಲಾದಂತೆ ಬದಲಾಗುತ್ತದೆ. ಈ ಹಿಂದೆ ಈ ಸಂಸ್ಥೆಗಾಗಿ ಖರೀದಿಸಿದ್ದ ಆಸ್ತಿಯ ಮೌಲ್ಯ ಇಂದು ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com