ಕಾಂಗ್ರೆಸ್ ನಿಂದ 23 ದಿನಗಳ 'ಭಾರತ್ ಜೋಡೋ ಯಾತ್ರೆ': ರಾಜ್ಯ ನಾಯಕರ ಜೊತೆ ರಾಹುಲ್ ಗಾಂಧಿ ಹೆಜ್ಜೆ

ಅತ್ತ ಆಡಳಿತಾರೂಢ ಬಿಜೆಪಿ ತನ್ನದೇ ರೀತಿಯಲ್ಲಿ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಅತ್ತ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. 
ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಕಳೆದ ಏಪ್ರಿಲ್ ನಲ್ಲಿ ಜನಾಶೀರ್ವಾದ ಯಾತ್ರೆಯ ಪ್ರಚಾರದ ಸಂದರ್ಭದಲ್ಲಿ
ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಕಳೆದ ಏಪ್ರಿಲ್ ನಲ್ಲಿ ಜನಾಶೀರ್ವಾದ ಯಾತ್ರೆಯ ಪ್ರಚಾರದ ಸಂದರ್ಭದಲ್ಲಿ

ಬೆಂಗಳೂರು: ಅತ್ತ ಆಡಳಿತಾರೂಢ ಬಿಜೆಪಿ ತನ್ನದೇ ರೀತಿಯಲ್ಲಿ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಅತ್ತ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕದಲ್ಲಿ 23 ದಿನಗಳ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ವತಿಯಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮತ್ತು ವಿವಿಧ ವೃತ್ತಿಪರ ಗುಂಪುಗಳ ನಡುವೆ ಚುನಾವಣಾ ಕಾರ್ಯತಂತ್ರದ ನಡೆಯಾಗಿ ರಾಜ್ಯ ಕಾಂಗ್ರೆಸ್ ನಾಯಕರು ಸಭೆಗಳು ಮತ್ತು ಸಂವಾದಗಳನ್ನು ಆಯೋಜಿಸುತ್ತಿದ್ದಾರೆ. ಈ ಪ್ರಚಾರವು ಗುಂಡ್ಲುಪೇಟೆಯಿಂದ ಪ್ರಾರಂಭವಾಗಿ ಮಂಡ್ಯ, ಕೇಂದ್ರ ಜಿಲ್ಲೆಗಳು ಮತ್ತು ಬಳ್ಳಾರಿ ಮೂಲಕ ಹಾದುಹೋಗುತ್ತದೆ. ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿಯವರು ಸುಮಾರು 350 ಕಿಲೋ ಮೀಟರ್ ಸಂಚರಿಸಲಿದ್ದಾರೆ. 

ಭಾರತ್ ಜೋಡೋ ಸಂಘಟನಾ ಸಮಿತಿಯ ಭಾಗವಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ದಿನಕ್ಕೆ ಎರಡು ಬಾರಿ ಮಧ್ಯಾಹ್ನ ಮತ್ತು ಸಂಜೆ ಸಭೆಗಳು ಮತ್ತು ಸಂವಾದಗಳನ್ನು ನಡೆಸಲಿದ್ದಾರೆ. ರೈತರು, ಕಾರ್ಮಿಕರು, ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಇತರ ವಲಯಗಳನ್ನು ಒಳಗೊಂಡಂತೆ ಕ್ಷೇತ್ರವಾರು ಗುಂಪುಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಜನರ ಸಮಸ್ಯೆಗಳನ್ನು ಆಲಿಸುತ್ತೇವೆ, ಅವರ ದೃಷ್ಟಿಕೋನವನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ ಎಂದರು. ಈ ಎಲ್ಲಾ ಮಾಹಿತಿಗಳನ್ನು ಮುಂದಿನ ಚುನಾವಣೆಯ ವೇಳೆಗೆ ಪಕ್ಷದ ಪ್ರಣಾಳಿಕೆಯಲ್ಲಿ ಬಳಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನವಿರೋಧಿ ಕಾನೂನುಗಳನ್ನು ಹೇಗೆ ರೂಪಿಸಿವೆ ಎಂಬುದರ ಬಗ್ಗೆಯೂ ಮಾತನಾಡಲಾಗುವುದು. ರಾಜ್ಯದ ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ರಾಹುಲ್ ಗಾಂಧಿಯವರು ಸುಮಾರು 10 ಸಾವಿರ ಜನರೊಂದಿಗೆ ಸಂವಾದ ನಡೆಸುವ ಉದ್ದೇಶವಿದೆ ಎಂದರು.

ಯಾತ್ರೆಯಲ್ಲಿ ನಾವು ಜಾತಿ, ಸಮುದಾಯ ಎಂದು ನೋಡುವುದಿಲ್ಲ. ಅದು ಎಲ್ಲಾ ಸಮಯದಲ್ಲೂ ಕೆಲಸ ಮಾಡುವುದಿಲ್ಲ. ಈ ಅಭಿಯಾನದ ಉದ್ದೇಶವು ಜಾತಿ ಆಧಾರಿತ ಸಭೆಗಳಿಗಿಂತ ಭಿನ್ನವಾಗಿ ಎಲ್ಲಾ ಜಾತಿ ಮತ್ತು ಸಮುದಾಯದ ಜನರನ್ನು ತಲುಪುವುದಾಗಿದೆ. ರಾಹುಲ್ ಗಾಂಧಿಯವರು ಹಳ್ಳಿ, ಪಟ್ಟಣ ಜನರನ್ನು ಹೆಚ್ಚಾಗಿ ಸಂಪರ್ಕಿಸಿ ಮಾತನಾಡಿಸಬೇಕೆಂದು ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು. 

ಭಾರತ್ ಜೋಡೋ ಅಭಿಯಾನದಲ್ಲಿ ಸಮುದಾಯ ಆಧಾರಿತ ಸಭೆಗಳು ಇರುವುದಿಲ್ಲ, ಮುಂದಿನ ದಿನಗಳಲ್ಲಿ ಅದನ್ನು ಕೂಡ ಕಾಂಗ್ರೆಸ್ ವತಿಯಿಂದ ನಡೆಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com