'ಅಗ್ನಿಫಥ್' ಯೋಜನೆಗೆ ವಿರೋಧ ಸಲ್ಲದು: ತಮ್ಮ ಸಹೋದರನ ಪುತ್ರನ ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ; ಎಸ್ ಎಂ ಕೃಷ್ಣ
ಸೇನೆಗೆ ಅಲ್ಪಾವಧಿಗೆ ಯುವಕರ ನೇಮಕಾತಿ ‘ಅಗ್ನಿಪಥ್’ ಯೋಜನೆಯನ್ನು ಶ್ಲಾಘಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಯೋಜನೆಗೆ ವಿರೋಧ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
Published: 23rd June 2022 09:16 AM | Last Updated: 23rd June 2022 09:16 AM | A+A A-

ಎಸ್.ಎಂ ಕೃಷ್ಣ
ಮೈಸೂರು: ಸೇನೆಗೆ ಅಲ್ಪಾವಧಿಗೆ ಯುವಕರ ನೇಮಕಾತಿ ‘ಅಗ್ನಿಪಥ್’ ಯೋಜನೆಯನ್ನು ಶ್ಲಾಘಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಯೋಜನೆಗೆ ವಿರೋಧ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಸ್ವಗ್ರಾಮ ಮದ್ದೂರಿನ ಸೋಮನಹಳ್ಳಿಯಲ್ಲಿ ಸಹೋದರ ದಿವಂಗತ ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿಕೊಂಡರು.
ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. 20 ವರ್ಷ ತುಂಬಿದ ಯುವಕರು ಎರಡು ವರ್ಷ ಸೈನಿಕ ಶಿಕ್ಷಣ ಕಲಿಯುವುದು ಕಡ್ಡಾಯವಾಗಿದೆ. ಇದು ಆದರ್ಶಪ್ರಾಯ ಯೋಜನೆಯಾಗಿದೆ ಎಂದು ಅವರು ಶ್ಲಾಘಿಸಿದರು. ಅಗ್ನಿವೀರರು ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಬೇರೆ ಕಡೆಗಳಲ್ಲಿ ಉದ್ಯೋಗಗಳನ್ನು ಅವಲಂಬಿಸುವುದಕ್ಕೆ ಅವಕಾಶವಿದೆ. ಮಿಲಿಟರಿಯ ವಿವಿಧ ವಿಭಾಗಗಳು, ಖಾಸಗಿ ಕಂಪನಿಗಳು, ಸರಕಾರಿ ಹುದ್ದೆಗಳಲ್ಲೂ ಮೀಸಲಾತಿ ನೀಡುತ್ತಿರುವುದರಿಂದ ಉದ್ಯೋಗಕ್ಕೆ ಅವಕಾಶಗಳಿವೆ ಎಂದು ಅವರು ಹೇಳಿದರು.
ಈ ಯೋಜನೆಯನ್ನು ರಾಜಕೀಯ ಹಿನ್ನೆಲೆಯಿಂದ ನೋಡದೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ನೋಡಬೇಕು. ಅಭಿವೃದ್ಧಿಶೀಲ ದೇಶಗಳು ಇಂತಹ ಯೋಜನೆಗಳಿಂದ ಪ್ರಗತಿಯತ್ತ ದಾಪುಗಾಲಿಟ್ಟಿವೆ. ಭಾರತವೂ ಆ ದಿಸೆಯಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ ಎಂದರು. ತಮ್ಮ ಸಹೋದರ ವಿಧಾನಪರಿಷತ್ ಮಾಜಿ ಸದಸ್ಯ ದಿವಂಗತ ಎಸ್.ಎಂ.ಶಂಕರ್ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ, ನನ್ನ ಸಹೋದರ ಉತ್ತಮ ರಾಜಕಾರಣಿ, ಸಮಾಜ ಸೇವಕರಾಗಿ ಈ ಭಾಗದ ಜನರಿಗೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದು ಸ್ಮರಿಸಿದರು.
ತಮ್ಮ ಸಹೋದರನ ಮಗನ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣ, ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಎಸ್.ಎಂ.ಶಂಕರ್ ಪುತ್ರ ಗುರುಚರಣ್ ಸ್ಪರ್ಧಿಸುವ ವದಂತಿ ತಳ್ಳಿಹಾಕಿದರು. ಗುರುಚರಣ್ ತಾಲ್ಲೂಕಿನಲ್ಲಿ ಜನಸೇವೆ ಮಾಡುತ್ತಿದ್ದು, ಅವರ ಕಾರ್ಯವೈಖರಿ ಸಾರ್ವಜನಿಕರಿಗೆ ಸಂತಸ ತಂದಿದೆ ಎಂದರು.