ಪಕ್ಷಗಳ ಸೈದ್ಧಾಂತಿಕ ವೈರುಧ್ಯ 'ಮಹಾ' ಸರ್ಕಾರದ ಪತನಕ್ಕೆ ಕಾರಣ; ಆಪರೇಷನ್ ಕಮಲ ನಡೆದಿಲ್ಲ: ಮುರುಗೇಶ್ ನಿರಾಣಿ

ಮಹಾರಾಷ್ಟ್ರ ರಾಜ್ಯದಲ್ಲಿ ಸೈದ್ಧಾಂತಿಕ ವೈರುಧ್ಯದ ಮನಸ್ಥಿತಿಯ ಪಕ್ಷಗಳು ಸೇರಿ ಸರ್ಕಾರ ಮಾಡಿದಾಗಲೇ ಕೋಮಾ ಸ್ಥಿತಿ ತಲುಪಿತ್ತು. ಹೀಗಾಗಿ ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾದರೆ ಬಿಜೆಪಿ ಹೊಣೆಯಾಗಲು ಸಾಧ್ಯವೇ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಳಗಾವಿ: ಮಹಾರಾಷ್ಟ್ರ ರಾಜ್ಯದಲ್ಲಿ ಸೈದ್ಧಾಂತಿಕ ವೈರುಧ್ಯದ ಮನಸ್ಥಿತಿಯ ಪಕ್ಷಗಳು ಸೇರಿ ಸರ್ಕಾರ ಮಾಡಿದಾಗಲೇ ಕೋಮಾ ಸ್ಥಿತಿ ತಲುಪಿತ್ತು. ಹೀಗಾಗಿ ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾದರೆ ಬಿಜೆಪಿ ಹೊಣೆಯಾಗಲು ಸಾಧ್ಯವೇ ಎಂದು ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಉದ್ಧವ್‌ ಠಾಕ್ರೆ ಮತ್ತು ಏಕನಾಥ ಶಿಂಧೆ ನಡುವಿನ ಭಿನ್ನಾಭಿಪ್ರಾಯದಿಂದ ಶಿವಸೇನೆ ಇಬ್ಬಾಗವಾಗಿದೆ. ಇದರಲ್ಲಿ ಬಿಜೆಪಿ ಕೈವಾಡ ಇಲ್ಲ, ಬಿಜೆಪಿ ಆಪರೇಷನ್ ಕಮಲ ಮಾಡಿಲ್ಲ. 50 ಶಾಸಕರಿಗೆ ಆಪರೇಷನ್ ಕಮಲ ಮಾಡಲು ಸಾಧ್ಯವೇ? ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಸೇರಿ ಸರ್ಕಾರ ಮಾಡಿದಾಗಲೇ ಗೊತ್ತಾಗಿತ್ತು, ಈ ಸರ್ಕಾರ ಬಹಳ‌ ದಿನ ನಡೆಯೋದಿಲ್ಲ‌ ಎಂಬುದು. ಮೂರು ಪಕ್ಷಗಳು ಸೇರಿ ಸರ್ಕಾರ ಮಾಡಿದ್ದೇ ದೊಡ್ಡ ತಪ್ಪಾಗಿತ್ತು. ಆ ಸರ್ಕಾರ ಇಲ್ಲಿಯವರೆಗೂ ನಡೆದಿದ್ದೇ ದೊಡ್ಡ ವಿಷಯ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಮಹಾರಾಷ್ಟ್ರ ಸರ್ಕಾರದಲ್ಲಿ ಒಬ್ಬರ ಬಳಿ ಸ್ಟೇರಿಂಗ್, ಒಬ್ಬರ ಬಳಿ ಬ್ರೇಕ್, ಒಬ್ಬರ ಬಳಿ ಎಕ್ಸಲೇಟರ್ ಎಂಬಂತಾಗಿತ್ತು. ಮೂರು ಪಕ್ಷಗಳು ಚುನಾವಣೆಗೆ ಹೋಗಿದ್ದ ವೇಳೆ ಅವರ ಸಿದ್ಧಾಂತಗಳು, ಪ್ರಣಾಳಿಕೆಗಳು ಬೇರೆ ಬೇರೆ ಆಗಿದ್ದವು. ಹಾಗಾಗಿ ಅವರೆಲ್ಲ ಸೇರಿ ಸರ್ಕಾರ ನಡೆಸಿದ್ದೇ ತಪ್ಪಾಗಿತ್ತು ಎಂದು ಹೇಳಿದರು.

ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ, ಅವರು ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ರಾಜಕಾರಣ ಮಾಡುವವರು ಕನಸು ಕಾಣಲಿ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದರು. ಇನ್ನೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಮೇಶ ಕತ್ತಿ ಅವರು ಒಂಬತ್ತು ಬಾರಿ ಚುನಾಯಿತರಾಗಿದ್ದಾರೆ. ಅವರಿಗೆ ಅನುಭವ ಇದೆ, ಅದು ಅವರ ವೈಯಕ್ತಿಕ ವಿಚಾರ. ಇದು ಪಕ್ಷದ್ದಾಗಲಿ ಅಥವಾ ಸರ್ಕಾರದ್ದಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com