ಕಾಂಗ್ರೆಸ್ ನಿಂದ ಎರಡು ತಂಡಗಳಾಗಿ ರಾಜ್ಯಾದ್ಯಂತ ಬಸ್ ಯಾತ್ರೆ, ಸದ್ಯದಲ್ಲಿಯೇ 'ಕೈ' ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತವನ್ನು ಜನತೆ ಮುಂದೆ ತೋರಿಸಲು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹೋಗುತ್ತೇವೆ. ಕಾಂಗ್ರೆಸ್ ನಿಂದ ನನ್ನ ನೇತೃತ್ವದಲ್ಲಿ ನಾಲ್ಕೈದು ಜನರ ತಂಡ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಾಲ್ಕೈದು ನಾಯಕರ ತಂಡ ವಿಶೇಷ ಬಸ್ಸಿನಲ್ಲಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತವನ್ನು ಜನತೆ ಮುಂದೆ ತೋರಿಸಲು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹೋಗುತ್ತೇವೆ. ಕಾಂಗ್ರೆಸ್ ನಿಂದ ನನ್ನ ನೇತೃತ್ವದಲ್ಲಿ ನಾಲ್ಕೈದು ಜನರ ತಂಡ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಾಲ್ಕೈದು ನಾಯಕರ ತಂಡ ವಿಶೇಷ ಬಸ್ಸಿನಲ್ಲಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಸ್ ಯಾತ್ರೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಒಳ್ಳೆಯ ಸಮಯ ಯಾವುದು ಎಂದು ನಾವು ಜ್ಯೋತಿಷಿಗಳಲ್ಲಿ ದಿನಾಂಕ, ಸಮಯ ಕೇಳಿ ಹೋಗುವುದಿಲ್ಲ, ಎಲ್ಲಾ ಕಾಲವೂ ಒಳ್ಳೆಯದೆ ಎಂದರು.

ನವೆಂಬರ್ ಕೊನೆಯ ವೇಳೆಗೆ ಅಥವಾ ಡಿಸೆಂಬರ್ ಆರಂಭದಲ್ಲಿ ಕೈ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು. ಪ್ರಚಾರಕ್ಕೆ ಬಳಸಲಾಗುವ ಬಸ್ ಸಿದ್ಧವಾಗುತ್ತಿದೆ. ಕೋಲಾರದಲ್ಲಿ ಈಗಾಗಲೇ ಒಮ್ಮೆ ಪ್ರಾಯೋಗಿಕವಾಗಿ ಬಸ್ ಓಡಿಸಲಾಗಿದೆ. ನಾವು ಜೋತಿಷ್ಯ ನೋಡುವುದಿಲ್ಲ. ಶೂನ್ಯ ಮಾಸದಲ್ಲಿ ಹುಟ್ಟಿದ ಮಕ್ಕಳೆಲ್ಲಾ ಏನ್ ಸತ್ತು ಹೋಗ್ತಾರಾ? ನಮಗೆ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ಯಾವುದೂ ಇಲ್ಲ. ಎಲ್ಲವೂ ಒಳ್ಳೆಯ ಕಾಲವೇ ಎಂದು ಅವರು ತಿಳಿಸಿದರು.

ಮೈಸೂರಲ್ಲಿ ಬಸ್​ ನಿಲ್ದಾಣ ಮೇಲೆ ಗುಂಬಜ್ ನಿರ್ಮಾಣ ವಿಚಾರದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ, ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಮತ ಧ್ರುವೀಕರಣಕ್ಕೆ ಹೊರಟಿದ್ದಾರೆ. ಒಬ್ಬ ಸಂಸದನಿಗೆ ಸಾಮಾನ್ಯ ಜ್ಞಾನ ಇಲ್ಲ ಅಂದ್ರೆ​ ಏನು ಹೇಳೋದು ಎಂದು ಕಿಡಿಕಾರಿದರು. 

ಸರ್ಕಾರದ ಹಣವನ್ನು ಖರ್ಚು ಮಾಡಿ ಕಟ್ಟಿಸುವ ಗುಂಬಜ್ ಅನ್ನು ಕೆಡವಲು ಇವರು ಯಾರು, ಇವರ ಹಣದಲ್ಲಿ ಕಟ್ಟಿಸಿದ್ದಾರೆಯೇ, ಇವನು ಯಾರು ಕೇಳಲು, 600 ವರ್ಷಗಳ ಇತಿಹಾಸವಿರುವ ಗುಂಬಜ್ ಅನ್ನು ಕೆಡವಿ ಇತಿಹಾಸ ತಿರುಚಲು ಹೋಗಬಾರದು ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು. 

ಬಲವಂತದ ಮತಾಂತರಕ್ಕೆ ನನ್ನ ವಿರೋಧವಿದೆ. ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಯಾರು ಯಾವ ಧರ್ಮ ಬೇಕಾದರೂ ಪಾಲನೆ ಮಾಡಬಹುದು. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪರವಾಗಿ ನಾನಿದ್ದೇನೆ ಎಂದರು. ಸಿದ್ದರಾಮಯ್ಯ ಅವಧಿಯಲ್ಲೂ PSI ನೇಮಕಾತಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಅವಧಿಯಲ್ಲೂ ಅಕ್ರಮ ನೇಮಕಾತಿ ಆಗಿದ್ದರೆ ತನಿಖೆ ಆಗಲಿ. ತನಿಖೆ ಮಾಡಿಸದೇ ಮೂರೂವರೆ ವರ್ಷದಿಂದ ಏನು ಮಾಡುತ್ತಿದ್ದರು? ಬಿಜೆಪಿಯವರು ಏಕೆ ಹೀಗೆ ಪದೇಪದೆ ಅದೇ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com