ಆಕ್ರೋಶದಲ್ಲಿ ಮಾತನಾಡಿದ್ದೇನೆ, ಅಪಮಾನ ಮಾಡುವ ಉದ್ದೇಶ ಇರಲಿಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕ್ಷಮೆಯಾಚಿಸಿದ ಹೆಚ್'ಡಿಕೆ

ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ...
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆ ಮಾತನ್ನು ಹಿಂಪಡೆಯುತ್ತೇನೆಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಬುಧವಾರ ಹೇಳಿದ್ದಾರೆ.

ಮಂಗಳವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಡೆಯುತ್ತಿತ್ತು, ಈ ವೇಳೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಂಗವಾದಿ ಹಾಗೂ ಮಾಸ್ತೇನಹಳ್ಳಿ ಗ್ರಾಮಕ್ಕೆ ರಥಯಾತ್ರೆ ಬರುತ್ತಿದ್ದ ವೇಳೆ ನೂರಾರು ಶಾಲಾ ಮಕ್ಕಳು ಕುಮಾರಸ್ವಾಮಿ ರಥಯಾತ್ರೆ ಬಳಿ ಬಂದು ಪ್ರತಿಭಟನೆ ನಡೆಸಿದರು.

ಈ ವೇಳೆ ರಥಯಾತ್ರೆ ಬಿಟ್ಟು ಕೆಳಗೆ ಬಂದ ಕುಮಾರಸ್ವಾಮಿಯವರು ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. 3-4 ವರ್ಷಗಳಿಂದ ಸರ್ಕಾರಿ ಶಾಲೆ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳಿಗೆ ಪಾಠ ಕೇಳಲು ಕಟ್ಟಡವಿಲ್ಲದೆ ಮಕ್ಕಳು ಅಶ್ವಥಕಟ್ಟೆ, ಹಾಲಿನ ಡೈರಿ, ದೇವಸ್ಥಾನ ಹೀಗೆ ಎಲ್ಲೆಂದರಲ್ಲಿ ಕುಳಿತು ಪಾಠ ಕೇಳುವ ಸ್ಥಿತಿಯನ್ನು ಆಲಿಸಿ ಬೇಸರ ವ್ಯಕ್ತಪಡಿಸಿದರು.

ಬಳಿಕ ಸ್ವತ: ಕುಮಾರಸ್ವಾಮಿಯವರೇ ಮಕ್ಕಳ ಜೊತೆಗೆ ತೆರಳಿ ಶಾಲಾ ಕಟ್ಟಡವನ್ನು ವೀಕ್ಷಣೆ ಮಾಡಿ ಆದಷ್ಟು ಬೇಗ ಶಾಲಾ ಕಟ್ಟಡ ಸರಿಪಡಿಸಿಕೊಡುವ ಭರವಸೆ ವಾಪಸ್ಸಾಗುತ್ತಿದ್ದರು.

ಬಳಿಕ ಕಾರು ಹತ್ತಿದ ಕುಮಾರಸ್ವಾಮಿಯವರು ಆಕ್ರೋಶಗೊಂಡು ಶ್ರೀನಿವಾಸಪುರದ ಹಾಲಿ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರ ಬಗ್ಗೆ ಮಾತನಾಡುತ್ತಾ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದರು. ಇದರ ವಿಡಿಯೋ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಕುಮಾರಸ್ವಾಮಿಯವರು ಬಳಸಿದ ಪದಗಳಿಗೆ ಟೀಕೆಗಳು ವ್ಯಕ್ತವಾಗತೊಡಗಿದವು.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆಂದು ಹೇಳಿದ್ದಾರೆ.

ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ  ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು. ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com