ಡ್ಯಾಮೇಜ್ ಕಂಟ್ರೋಲ್'ಗೆ ಬಿಜೆಪಿ ಮುಂದು: ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದ ನಳಿನ್ ಕುಮಾರ್ ಕಟೀಲ್

ನಟೋರಿಯಸ್ ರೌಡಿ ಶೀಟರ್ ಆಗಿದ್ದ ಸೈಲೆಂಟ್ ಸುನೀಲ ಬಿಜೆಪಿ ಸಂಸದರ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗಳಿಗೆ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ಇದೀಗ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾಗಿದೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು: ನಟೋರಿಯಸ್ ರೌಡಿ ಶೀಟರ್ ಆಗಿದ್ದ ಸೈಲೆಂಟ್ ಸುನೀಲ ಬಿಜೆಪಿ ಸಂಸದರ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗಳಿಗೆ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ಇದೀಗ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾಗಿದೆ.

ನಿನ್ನೆ ಚಾಮರಾಜಪೇಟೆಯಲ್ಲಿ ನಡೆದಿದ್ದ ರಕ್ತದಾನ ಶಿಬಿರದ ನೇತೃತ್ವ ಸೈಲೆಂಟ್ ಸುನೀಲ ವಹಿಸಿದ್ದರು. ಶಿಬಿರದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕರಾದ ಉದಯ್ ಗರುಡಚಾರ್ ಹಾಗೂ ಎನ್ ಆರ್ ರಮೇಶ್ ಭಾಗವಹಿಸಿದ್ದರು.

ಬಿಜೆಪಿ ಸಂಸದರು, ಶಾಸಕರ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಸೈಲೆಂಟ್ ಸುನೀಲ ರಾಜಕೀಯ ಪ್ರವೇಶಕ್ಕೆ ಎಂಟ್ರಿನ ಎಂಬ ಪ್ರಶ್ನೆಗಳು ಮೂಡಿದ್ದವು. ಈ ಸಂಬಂಧ ವಿರೋಧ ಪಕ್ಷ ಹಾಗೂ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದು, ಈ ಮೂಲಕ ರೌಡಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಸಂಸದರಿಗೂ ಶಾಕ್ ನೀಡಿದ್ದಾರೆ.

ಬಿಜೆಪಿ ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಸೈಲೆಂಟ್ ಸುನಿಲ್ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲಿಸುವವರು ಹಾಗೂ ಅಪರಾಧ ಹಿನ್ನೆಲೆಯವರಿಗೆ ಪಕ್ಷಕ್ಕೆ ನೋ ಎಂಟ್ರಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಂದ ವಿವರಣೆ ನೀಡುವಂತೆ ಫರ್ಮಾನು ಹೊರಡಿಸಲು ಪಕ್ಷದ ರಾಜ್ಯಾಧ್ಯಕ್ಷ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆವಹಿಸಲು ತಾಕೀತು ಮಾಡಿದ್ದಾರೆ. ಏನೇ ಇದ್ದರೂ ಪಕ್ಷದ ಗಮನಕ್ಕೆ ತರಬೇಕೆಂದೂ ಸೂಚಿಸಿದ್ದಾರೆ.

ಈ ನಡುವೆ ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್​ನಲ್ಲಿ ಎಷ್ಟು ರೌಡಿಶೀಟರ್​ಗಳಿದ್ದಾರೆ ಲೆಕ್ಕ ಹಾಕಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಮರ್ಥನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com