ನವೆಂಬರ್ 1 ರಿಂದ ಜೆಡಿಎಸ್ ಜನತಾ ಪಂಚರತ್ನ ಯಾತ್ರೆ ಆರಂಭ, ಕೃಷಿ ಪಂಪುಸೆಟ್ಟುಗಳಿಗೆ ಉಚಿತ ವಿದ್ಯುತ್: ಕುಮಾರಸ್ವಾಮಿ

ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಜನತಾ ಪಂಚರತ್ನ ರಥಯಾತ್ರೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಿಸಿದರು.
ಹೆಚ್.ಡಿ ಕುಮಾರಸ್ವಾಮಿ
ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಜನತಾ ಪಂಚರತ್ನ ರಥಯಾತ್ರೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈಗಾಗಲೇ ಪೂರ್ವ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಇದಕ್ಕಾಗಿ ವಾಹನಗಳು ಸಹ ಸಿದ್ದಗೊಳ್ಳುತ್ತಿವೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ‌ ಆರಂಭಿಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ‌ ಕಾರ್ಯಕ್ರಮಗಳ ಮೂಲಕ ತೋರಿಸುತ್ತೇವೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರು ಜೆಡಿಎಸ್‍ ಪರ ಪ್ರಚಾರಕ್ಕೆ ಬರಲಿದ್ದಾರೆ. ಈ ಬಗ್ಗೆ ಎರಡೂ ಪಕ್ಷಗಳು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಅ.8ರಂದು ಜನತಾ ಮಿತ್ರ ಸಮಾರೋಪ: ಅಕ್ಟೋಬರ್ 8ಕ್ಕೆ ಜನತಾ‌ಮಿತ್ರ ಸಮಾರೋಪ ಸಮಾರಂಭ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮದ್ಯಾಹ್ನ 3 ಘಂಟೆಗೆ ಆಯೋಜಿಸಿದ್ದೇವೆ. ಈ ಸಂಬಂಧ ಪೂರ್ವ ಸಿದ್ದತೆಗಾಗಿ ಚರ್ಚೆ ಮಾಡಲು ಬೆಂಗಳೂರು ನಗರ ಘಟಕದ ಪದಾಧಿಕಾರಿಗಳ ಸಭೆ ಕರೆದಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಬಿಬಿಎಂಪಿ ಚುನಾವಣಾ ಪ್ರಚಾರ: ಮಳೆಯಿಂದಾಗಿ ಜನತಾ ಮಿತ್ರ ಸಮಾರೋಪ ಕಾರ್ಯಕ್ರಮ ಎರಡು ಬಾರಿ ಮುಂದೂಡಿಕೆ ಆಗಿತ್ತು. ಅ.8ರಂದು ಮಧ್ಯಾಹ್ನ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಮುಂದಿನ ಬಿಬಿಎಂಪಿ ಚುನಾವಣಾ ಪ್ರಚಾರದ ಸಮಾವೇಶ ಕೂಡ ಇದೇ ಕಾರ್ಯಕ್ರಮದಿಂದ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು.

ತೆಲಂಗಾಣದ ಮಾದರಿಯಲ್ಲಿಯೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪುಸೆಟ್ಟುಗಳಿಗೆ 24/7 ಗುಣಮಟ್ಟದ ಉಚಿತ ವಿದ್ಯುತ್ ಪೂರೈಸಲಾಗುವುದು, ಈ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗುವುದು ಎಂದರು.

ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಸಕ್ತಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ಬಿಆರ್ ಎಸ್ ಪಕ್ಷಕ್ಕೆ ಇಲ್ಲ.‌ ಆದರೆ, ಜೆಡಿಎಸ್‌‌ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಬಂದಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

2024ರ ಲೋಕಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಸಿಆರ್ ಅವರು ಚಿಂತನೆ ನಡೆಸಿದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದಲ್ಲಿ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ ಎಂದು ಅವರು ಹೇಳಿದರು. ದಲಿತರ ಮೇಲಿನ ದೌರ್ಜನ್ಯ, ರೈತರ ನೆರವಿಗೆ ಧಾವಿಸುವ ಸಲುವಾಗಿ ನಾವು ಒಗ್ಗೂಡುತ್ತಿದ್ದೇವೆ. ಅದನ್ನೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮಾಡಿಕೊಂಡು ಮುಂದುವರಿಯುತ್ತಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ 15-20 ಕ್ಷೇತ್ರಗಳ ಮೇಲೆ ಕೆಸಿಆರ್ ಪ್ರಭಾವ ಇರಬಹುದು. ಅವರ ಅನೇಕ ಶಾಸಕರುಗಳಿಗೆ ಆ ಭಾಗದಲ್ಲಿ ನೆಂಟಸ್ಥನ ಇದೆ. ಹೈದರಾಬಾದ್ ಕರ್ನಾಟಕದಲ್ಲಿ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ನಾವು 15-20 ಕ್ಷೇತ್ರ ಕಲ್ಯಾಣ ಕರ್ನಾಟಕದಲ್ಲಿ ಗೆಲ್ಲಬಹುದು. ಅಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷ ನೆಲ ಕಚ್ಚಿದ ಮೇಲೆ ಖರ್ಗೆಗೆ ಸ್ಥಾನ: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಯಾರು ಇಲ್ಲದ ಸಂದರ್ಭದಲ್ಲಿ, ಪಕ್ಷ ನೆಲ ಕಚ್ಚಿರುವ ವೇಳೆ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಕೂರಿಸಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.

ಪಕ್ಷ ಸದೃಢವಾಗಿದ್ದಾಗಲೇ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಒಂದು ವರ್ಗದ ಮತಗಳು ಪರಿವರ್ತನೆ ಆಗುತ್ತವೆ ಅಂತ ಲೆಕ್ಕಾಚಾರದಲ್ಲಿದ್ಧಾರೆ. ಮುಂದೆ ಅವರಿಗೆ ಏನು ಪ್ರಾಮುಖ್ಯತೆ ಸಿಗುತ್ತದೆ ಅನ್ನೋದು ಮುಖ್ಯ ಅಲ್ಲವೇ? ಅವರು ಅಧ್ಯಕ್ಷರಾಗುವುದರಿಂದ ಏನು ಪ್ರಭಾವ ಬೀರುತ್ತದೆ ಎಂಬುದನ್ನು ಈಗಲೇ ಚರ್ಚೆ ಮಾಡೋದು ಬೇಡ. ಏನೆಂಬುದು ಇನ್ನ ಆರು ತಿಂಗಳು ಇದ್ದಾಗ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com