ಮೊರ್ಬಿ ಸೇತುವೆ ಕುಸಿತ: ಇದು ಗುಜರಾತ್ ಮಾಡೆಲ್‌ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ- ಕಾಂಗ್ರೆಸ್ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿನ ಮೊರ್ಬಿ ಕೇಬಲ್ ಸೇತುವೆ ಕುಸಿತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. 
ಮೋರ್ಬಿ ಸೇತುವೆ ಕುಸಿತ
ಮೋರ್ಬಿ ಸೇತುವೆ ಕುಸಿತ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತಿನ ಮೊರ್ಬಿ ಕೇಬಲ್ ಸೇತುವೆ ಕುಸಿತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ. 

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಜ್ಯ ಕಾಂಗ್ರೆಸ್, ಮೊರ್ಬಿ ತೂಗುಸೇತುವೆ ಕುಸಿತದಲ್ಲಿ 100ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು. ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ ಎಂದು ಟೀಕಿಸಿದೆ.

ಇದು ಗುಜರಾತ್ ಮಾಡೆಲ್‌ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ? 40 ಪರ್ಸೆಂಟ್‌ "ಒಂದು ದೇಶ ಒಂದು ಕಮಿಷನ್ ಎಂದು ಜಾರಿಯಾಗಿದೆಯೇ? ಎಂದು ಪ್ರಶ್ನಿಸಿದೆ.

ಮೊರ್ಬಿ ತೂಗುಸೇತುವೆಯನ್ನು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಸಾರ್ವಜನಿಕ ಪ್ರವೇಶಕ್ಕೆ ಬಿಡಲಾಗಿತ್ತು. ಅನುಭವವಿಲ್ಲದ ಗಡಿಯಾರ ತಯಾರಿಕಾ ಕಂಪೆನಿಗೆ ದುರಸ್ತಿ ಕೆಲಸ ವಹಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಕಂಪೆನಿಯ ಅನುಭವ ಪರಿಗಣಿಸಿರಲಿಲ್ಲವೇಕೆ? ಗುಜರಾತಿನಲ್ಲೂ 40 ಪರ್ಸೆಂಟ್ ಸರ್ಕಾರ ಸ್ಥಾಪಿಸಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ.

ಇನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ದಮ್ಮು ತಾಕತ್ತಿನ ಭಾಷಣ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್,  ಮುಖ್ಯಮಂತ್ರಿಗಳೇ, ಸಿನೆಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಬಿಟ್ಟು ನೋಡಿ, ರಸ್ತೆ ಗುಂಡಿಗಳು ಕಾಣುತ್ತವೆ. ಪ್ರಾಣ ಬಿಟ್ಟವರ ಕುಟುಂಬದ ರೋಧನೆ ಕಾಣುತ್ತದೆ, ನಿಮ್ಮ ವೈಫಲ್ಯಗಳು ಕಾಣುತ್ತವೆ ಎಂದು ಕಾಂಗ್ರೆಸ್ ಹೇಳಿದೆ.

ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ? 'ಬೊಮ್ಮಾಯಿ ವರ್ಷನ್ ಅಚ್ಛೆ ದಿನಗಳ' ಭಾಷಣ ಕುಟ್ಟುವ ಬೊಮ್ಮಾಯಿ ಅವರೇ, ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ನಿಮಗೆ ದಮ್ಮು ತಾಕತ್ತು ಇಲ್ಲದಾಗಿರುವುದೇಕೆ? ನಿಮ್ಮ ಪ್ರಲಾಪ ಮೈಕ್ ಮುಂದೆ ಮಾತ್ರವೇ? ಎಂದು ಟೀಕಾ ಪ್ರಹಾರ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com