ಜನರ ಮನಗೆಲ್ಲಲು ಮತ್ತೆ ಗ್ರಾಮ ವಾಸ್ತವ್ಯಕ್ಕೆ ಹೆಚ್'ಡಿಕೆ ಮುಂದು!

ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಫಲ ನೀಡಿದ್ದ ಹಳೆಯ ತಂತ್ರಗಳ ಮತ್ತೆ ಪ್ರಯೋಗ ಮಾಡಲು ಹೆಚ್'ಡಿ ಕುಮಾರಸ್ವಾಮಿಯವರು ಮುಂದಾಗಿದ್ದು, ಪಂಚರತ್ನ ರಥಯಾತ್ರೆ ವೇಳೆ ಗ್ರಾಮ ವಾಸ್ತವ್ಯ ಮುಂದುವರೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಹೆಚ್'ಡಿ ಕುಮಾರಸ್ವಾಮಿ
ಹೆಚ್'ಡಿ ಕುಮಾರಸ್ವಾಮಿ

ಬೆಂಗಳೂರು/ಕೋಲಾರ: ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಫಲ ನೀಡಿದ್ದ ಹಳೆಯ ತಂತ್ರಗಳ ಮತ್ತೆ ಪ್ರಯೋಗ ಮಾಡಲು ಹೆಚ್'ಡಿ ಕುಮಾರಸ್ವಾಮಿಯವರು ಮುಂದಾಗಿದ್ದು, ಪಂಚರತ್ನ ರಥಯಾತ್ರೆ ವೇಳೆ ಗ್ರಾಮ ವಾಸ್ತವ್ಯ ಮುಂದುವರೆಸಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಪಂಚರತ್ನ ರಥಯಾತ್ರೆ ವೇಳೆ ಗ್ರಾಮಗಳಲ್ಲಿ ವಾಸ್ತವ ಹೂಡುವ ಕುಮಾರಸ್ವಾಮಿಯವರು, ಈ ವೇಳೆ ಜನರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳ ಆಲಿಸುವುದು ಸೇರಿದಂತೆ ಪಕ್ಷದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆಂದು ತಿಳಿದುಬಂದಿದೆ.

ಮಂಗಳವಾರ ಮುಳಬಾಗಲು ವಿಧಾನಸಭಾ ಕ್ಷೇತ್ರದ ಕುರುಡುಮಲೆಯಿಂದ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಅವರು, ಕೂಡಲಮಲೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ರಾತ್ರಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳು ಮತ್ತು ಕೋವಿಡ್ ನಿಂದಾಗಿ ತಮ್ಮ ಆಪ್ತರನ್ನು ಕಳೆದುಕೊಂಡ ಕುಟುಂಬಸ್ಥರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

1994ರಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್'ಡಿ ದೇವೇಗೌಡ ಅವರು ಪಕ್ಷದ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಿದ್ದರು. ಹೀಗಾಗಿ ಮುಳಬಾಗಿಲು ಮೂಲಕ ಪಕ್ಷದ ಪ್ರಚಾರ ಕಾರ್ಯಕ್ರಮ ಆರಂಭಿಸಿದರೆ ಶುಭವಾಗುತ್ತದೆ ಎಂಬ ನಂಬಿಕೆಯಿದೆ.

ಕುಮಾರಸ್ವಾಮಿಯವರ ಪುತ್ರ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು, ಹಳೇ ಮೈಸೂರು ಭಾಗದ 36 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆಯ ಮೊದಲ ಹಂತದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ವೇಳೆ 100 ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ಜಿಲ್ಲಾಧ್ಯಕ್ಷ ವೆಂಕಟಶಿವ ರೆಡ್ಡಿ, ಮಲ್ಲೇಶ್ ಬಾಬು, ಸಿಎಂಆರ್ ಶ್ರೀನಾಥ್, ಕುರ್ಕಿ ರಾಜೇಶ್ವರಿ, ರಾಮೇಗೌಡ ಸೇರಿದಂತೆ ಕಾರ್ಯಕ್ರಮದ ಉಸ್ತುವಾರಿ ಸಮೃದ್ದಿ ಮಂಜುನಾಥ್ ಮಾತನಾಡಿ, ಮುಳಬಾಗಲು ಹೊರವಲಯದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಲಕ್ಷ ಜನರು ಭಾಗವಹಿಸಲಿದ್ದಾರೆಂದು ಹೇಳಿದರು.
 
ಪಕ್ಷ ಗೆಲ್ಲುವ ಸಾಮರ್ಥ್ಯವಿರುವ ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರಚಾರ ನಡೆಯಲಿದೆ. ಡಿಸೆಂಬರ್ 6 ರಂದು ಆನೇಕಲ್, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪಕ್ಷವು ರ್ಯಾಲಿಯನ್ನು ಆಯೋಜಿಸಲಿದ್ದು, ಮುಂದಿನ ಹಂತದಲ್ಲಿ ಪಕ್ಷವು ಪ್ರಬಲವಾದ ನೆಲೆಯನ್ನು ಕಂಡುಕೊಳ್ಳಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com