ನಾನು ಚಿತ್ರದುರ್ಗ ಬಾಯ್ಸ್ ಬಗ್ಗೆ ಮಾತ್ರ ಮಾತನಾಡುತ್ತೇನೆ: ಮುರುಘಾ ಶ್ರೀ ವಿರುದ್ಧ ಯತ್ನಾಳ್ ವಾಗ್ದಾಳಿ

ನಾನು ಯಾವ ಬಾಯ್ಸ್ ವಿರುದ್ಧನೂ ಮಾತನಾಡುವುದಿಲ್ಲ. ಆದರೆ ನಾನು ಚಿತ್ರದುರ್ಗ ಬಾಯ್ಸ್ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ...
ಬಸನಗೌಡ ಪಾಟೀಲ್‌ ಯತ್ನಾಳ್‌
ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಂಗಳೂರು: ನಾನು ಯಾವ ಬಾಯ್ಸ್ ವಿರುದ್ಧನೂ ಮಾತನಾಡುವುದಿಲ್ಲ. ಆದರೆ ನಾನು ಚಿತ್ರದುರ್ಗ ಬಾಯ್ಸ್ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. 

ಇಂದು ಬಾಂಬೆ ಬಾಯ್ಸ್ ಗೆ ಅಸಮಾಧಾನ ಆಗಿರುವ ಎಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಬಾಂಬೆ ಬಾಯ್ಸ್ ರಿಂದ ಈ ಸರ್ಕಾರ ರಚನೆ ಆಗಿದೆ. ಬಾಂಬೆ ಬಾಯ್ಸ್ ಗೆ ನೋವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನ ಕೊಡ್ತೀನಿ ಎಂದು ಸಿಎಂ ಭರವಸೆ ಕೊಟ್ಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅವರು  ನಾನು ಯಾವ ಬಾಯ್ಸ್ ವಿರುದ್ಧನೂ ಮಾತನಾಡಿಲ್ಲ. ನಾನು ಚಿತ್ರದುರ್ಗ ಬಾಯ್ಸ್ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.

ಇಂದು ಹೈ ಕೋರ್ಟ್ ಸಿಜೆಗೆ ನಾನು ಪತ್ರ ಬರೆಯುತ್ತೇನೆ. ಚಿತ್ರದುರ್ಗದ ಮುರುಘಾ ಮಠದ ಸಂಬಂಧ ಸುಪ್ರಿಂ ಕೋರ್ಟ್ ಅಥವಾ ಕರ್ನಾಟಕದ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ‌ ಮಾಡುವಂತೆ ಮನವಿ ಸಲ್ಲಿಸುತ್ತೇನೆ. ಅಪ್ರಾಪ್ತ ಬಾಲಕಿ‌ ಮೇಲಿನ ಲೈಂಗಿಕ‌ ಕಿರುಕುಳ ಆರೋಪ ಹಿನ್ನಲೆಯಲ್ಲಿ ಮಠದಲ್ಲಿನ ಆಗುಹೋಗುಗಳ ಬಗ್ಗೆ ತನಿಖೆ ಮಾಡಬೇಕು. ಮಠದ ವ್ಯವಹಾರ, ಬ್ಯಾಂಕ್ ವ್ಯವಹಾರ, ಆಸ್ತಿ ಬಗ್ಗೆ ಸಮಿತಿ ತನಿಖೆ ನಡೆಸಬೇಕು ಎಂದರು.

ಸಮಾಜದ ಮುಖಂಡರ ನೇತೃತ್ವದ ಸಮಿತಿ ಮಾಡಿ ತನಿಖೆ ನಡೆಸಬೇಕು. ಸ್ವಾಮಿಗಳನ್ನು ಗದ್ದುಗೆಯಿಂದ ಕೆಳಗಿಳಿಸಿ, ‌ಮೂರು ತಿಂಗಳೊಳಗೆ ಒಳ್ಳೆಯ ಶ್ರೀಗಳನ್ನು ನೇಮಕ ಮಾಡಬೇಕು ಎಂದು ಹೈ ಕೋರ್ಟ್ ಸೂಚನೆ ನೀಡಬೇಕು ಎಂದು ಕೋರಿ ಪತ್ರ ಬರೆಯುತ್ತೇನೆ. ಆ ಮೂಲಕ ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದರು.

ಘಟನೆಯಿಂದ  ಸಂಪೂರ್ಣ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಮಾನವಾಗಿದೆ. ಆ ಮಠ ಪ್ರಗತಿಪರರ, ನಕ್ಸಲರ ಅಡ್ಡೆ ಆಗಿತ್ತು. ಅದರ ಸಮಗ್ರ ತನಿಖೆ ಆಗಬೇಕು. ಅದೊಂದು ದೊಡ್ಡ ಶ್ರೀಮಂತ ಮಠವಾಗಿದೆ. ಮಠದ ಆಡಳಿತಾಧಿಕಾರಿ ಮಠದ ಆಸ್ತಿ ಮಾರಿದ್ದಾರೆ. ಲೀಸ್ ಗೆ ಕೊಟ್ಟಿದ್ದಾರೆ. ಕೊಡಗಿನಲ್ಲಿ 10 ಸಾವಿರ ಎಕರೆ ಕಾಫಿ ಎಸ್ಟೇಸ್ ಇತ್ತು.‌ ಈಗ ಬರೇ 200 ಎಕರೆ ಇದೆ ಎಂದರು.

ಮುರುಗಾ ಶ್ರೀ ಬಳಿ ಹೆಲಿಕಾಪ್ಟರ್ ಇದೆ. ಅದು ಅವರದ್ದೋ ಅಥವಾ ಅವರ ಪರ ಧ್ವನಿ ಎತ್ತುವವರು ಯಾರಾದರೂ ಕೊಟ್ಟಿದ್ದಾರೋ ಎಂಬ ತನಿಖೆ ಆಗಬೇಕು. ಅದು ವೀರಶೈವ ಲಿಂಗಾಯತರ ದೊಡ್ಡ ಮಠ ಆಗಿದೆ. ಲಿಂಗಾಯತ ಸಂಪ್ರದಾಯ ತರ ಮಠ ನಡೆಯಬೇಕು.‌ ಜಾತ್ಯಾತೀತರು, ಪ್ರಗತಿಪರರು, ನಕ್ಸಲರಿಗೆ ಬಸವ ಪ್ರಶಸ್ತಿ ಕೊಟ್ಟು ಬಸವ ಸಂಪ್ರದಾಯ ಹಾಳಾಗಿದೆ. ಯಾವುದೇ ಮಠದ ಸ್ವಾಮಿಗಳು ಸಂಪ್ರದಾಯದಂತೆ ನಡೆಯಬೇಕು ಎಂದರು.

ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ನಿಲ್ಲಿಸಿದ್ದಾರೆ.‌ ನಕ್ಸಲರಿಗೆ, ಪಾಕಿಸ್ತಾನದ ಮಲಾಲ್ ರಿಗೆ ಬಸವ ಶ್ರೀ ಪ್ರಶಸ್ತಿ ಕೊಡುತ್ತಾರೆ. ಅದು ಲಿಂಗಾಯತ ಮಠದ ಸಂಪ್ರದಾಯ ಅಲ್ಲ. ಮಠ ಬಡವರಿಗೆ ಉಚಿತ ಶಿಕ್ಷಣ ನೀಡುವುದಾಗಿದೆ. ಸಮಾಜ ಸೇವೆ ಮಾಡಬೇಕು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಥವಾ ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ಮಾಡಬೇಕು ಎಂದು ಪತ್ರ ಬರೆದಿದ್ದೇನೆ ಎಂದರು.

ಪಂಚಮಸಾಲಿ ಸಮುದಾಯವನ್ನು ಎಸ್ ಟಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಧಾನಸಭೆ ಅಧ್ಯಕ್ಷರನ್ನು ಭೇಟಿಯಾಗಿ 25 ಶಾಸಕರೆಲ್ಲರೂ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು, ಕುರುಬರನ್ನು ಎಸ್ ಟಿಗೆ ಸೇರಿಸುವ ಸಂಬಂಧ ಸಮಗ್ರ ಚರ್ಚೆಗೆ ಅವಕಾಶ ಮಾಡಿಕೊಡುವಂತೆ  ಮನವಿ ಮಾಡಿದ್ದೇವೆ ಎಂದು ಹೇಳಿದರು.

ಗೊಲ್ಲರು, ಕುರುಬರು ಎಸ್ ಟಿಗೆ, ಹಡಪದ, ಮಡಿವಾಳರನ್ನು  ಎಸ್ ಸಿಗೆ ಗೆ ಸೇರಿಸುವ ಬಗ್ಗೆ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಸೋಮವಾರ ಸದನದಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ ಎಂದು ಸ್ಪೀಕರ್ ಭರವಸೆ ನೀಡಿದ್ದಾರೆ ಎಂದರು.

ಇದೇ ವೇಳೆ, ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅದು ಪಾಕಿಸ್ತಾನದ ಕಾಂಗ್ರೆಸ್. ಅದು ಪಾಕಿಸ್ತಾನದ ಪರವಾಗಿರುವ ಕಾಂಗ್ರೆಸ್ ಕಾಂಗ್ರೆಸ್ ನಲ್ಲಿ ಪಾಕಿಸ್ತನಾದ ಬೆಂಬಲಿಗರಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com