ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಶನಿವಾರ ಭೇಟಿ ಮಾಡಿದರು.
ಬೆಂಗಳೂರಿನ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೇ ಖುದ್ದು ಭೇಟಿ ನೀಡಿದ ಡಿಕೆ.ಶಿವಕುಮಾರ್ ಅವರು, ಕೆಲಕಾಲ ಮಾತುಕತೆ ನಡೆಸಿದರು.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿರುವುದರಿಂದ ನಾಯಕರ ಈ ಸಭೆ ಮಹತ್ವ ಪಡೆದುಕೊಂಡಿದೆ.
ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಉದ್ಭವಿಸಬಹುದಾದ ಬಂಡಾಯ ಮತ್ತು ಅದನ್ನು ಶಮನಗೊಳಿಸುವ ಕಾರ್ಯತಂತ್ರದ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಖರ್ಗೆ ಭೇಟಿ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಡಿಕೆ.ಶಿವಕುಮಾರ್ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಇಂದು ಭೇಟಿ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಲಾಯಿತು ಎಂದು ಹೇಳಿದ್ದಾರೆ.
ಜೈ ಭಾರತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಏಪ್ರಿಲ್ 9 ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಭೇಟಿ ನೀಡುತ್ತಿದ್ದು, ಇದಕ್ಕೂ ಮೊದಲು ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಬೇಕೆ ಎಂಬ ಬಗ್ಗೆಯೂ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಉಳಿದ 100 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಏಪ್ರಿಲ್ 5 ರಂದು ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ನಡೆಸಲಿದೆ. ಏಪ್ರಿಲ್ 6 ಅಥವಾ 7 ರಂದು ಪಟ್ಟಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಇತ್ತೀಚೆಗೆ 124 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿ ಸಂಬಂಧ ಯಾವುದೇ ಬಂಡಾಯಗಳು ಎದುರಾಗಿಲ್ಲ. ಉಳಿದ 100 ಸ್ಥಾನಗಳ ಪೈಕಿ ಒಬ್ಬರೇ ಆಕಾಂಕ್ಷಿ ಇದ್ದ ಸುಮಾರು 35 ಸ್ಥಾನಗಳಿಗೆ ಪಕ್ಷವು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. "ಆದರೆ ಬಹು ಅಭ್ಯರ್ಥಿಗಳಿರುವ ಕ್ಷೇತ್ರಗಳಲ್ಲಿ ಸಮಸ್ಯೆಗಳು ಎದುರಾಗಿದೆ ಎಂದು ಮೂಲವೊಂದು ಮಾಹಿತಿ ನೀಡಿದೆ.
ಕಲಘಟಗಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬಣದ ಸಂತೋಷ್ ಲಾಡ್ ಮತ್ತು ನಾಗರಾಜ್ ಚೆಬ್ಬಿ ನಡುವೆ ಪೈಪೋಟಿ ಇದೆ. ಅದೇ ರೀತಿ ಪುತ್ತೂರಿನಲ್ಲಿ ಶಿವಕುಮಾರ್ ಬೆಂಬಲಿಗ ಅಶೋಕ್ ರೈ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಖಂಡರ ಒಂದು ವರ್ಗದ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಮಂಗಳೂರು ಉತ್ತರದಲ್ಲಿ ಮೊಹಿಯುದ್ದೀನ್ ಬಾವ ಮತ್ತು ಇನಾಯತ್ ಅಲಿ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ತಿಳಿದುಬಂದಿದೆ.
Advertisement