ನಮ್ಮನ್ನು ಬೆದರಿಸಲು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಬಿಜೆಪಿ: ಕಾಂಗ್ರೆಸ್

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಆಡಳಿತಾರೂಢ ಬಿಜೆಪಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರತಿಪಕ್ಷಗಳಿಗೆ ಬೆದರಿಕೆ ಹಾಕಲು ಆಡಳಿತಾರೂಢ ಬಿಜೆಪಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಚುನಾವಣೆ ಸಮೀಪಿಸುತ್ತಿದ್ದು, ಈ ನಡುವಲ್ಲೇ ಪ್ರತಿಪಕ್ಷಗಳ ಬೆದರಿಸಲು ಬಿಜೆಪಿ ಆದಾಯ ತೆರಿಗೆ, ಇಡಿ ಮತ್ತು ಸಿಬಿಐ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಅಭ್ಯರ್ಥಿಗಳು, ಕಾಂಗ್ರೆಸ್‌ಗಾಗಿ ಕೆಲಸ ಮಾಡುವವರು ಮತ್ತು ಪಕ್ಷದ ಬಗ್ಗೆ ಸಹಾನುಭೂತಿ ಹೊಂದಿರುವ ಜನರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿಯು, ಆದಾಯ ತೆರಿಗೆ ಇಲಾಖೆ ಮತ್ತು ಇಡಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಿದೆ. ಇಂತಹ ದುರ್ಬಳಕೆಗೆ ಕುರಿತು ಈಗಾಗಲೇ ಸಾವಿರಾರು ನಿದರ್ಶನಗಳಿವೆ. ಈಗಾಗಲೇ ಅಧಿಕಾರಿಗಳು ನಮ್ಮ ಪಕ್ಷದವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಸ್ಪಷ್ಟ ಅಧಿಕಾರ ದುರುಪಯೋಗವಲ್ಲದೆ, ಮತ್ತೇನು? ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆಯನ್ನು ಮಂಗಳವಾರ ನಡೆಸಲಾಗುತ್ತಿದ್ದು, ಈ ಸಭೆ ಮಧ್ಯದಲ್ಲಿ ತರಾತುರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸುರ್ಜೇವಾಲಾ ಅವರು ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿದರು.

ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಬಿಜೆಪಿ ಸರ್ಕಾರದ ಈ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಬಿಜೆಪಿಯ ಕೊಳಕು ರಾಜಕೀಯದ ವಿರುದ್ಧ ಹೋರಾಡುತ್ತೇವೆಂದು ಹೇಳಿದರು.

2018 ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು 60 ಕ್ಕೂ ಹೆಚ್ಚು ದಾಳಿಗಳು ಹಾಗೂ ಕಾರ್ಯಾಚರಣೆಗಳಿಗೆ ಒಳಪಟ್ಟಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಗೆ ಸೋಲಿನ ಭಯವಿದೆ. ಏಕೆಂದರೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗುವ ಭವಿಷ್ಯಗಳನ್ನು ನುಡಿಯುತ್ತಿವೆ. ಅನೇಕ ಹಾಲಿ ಶಾಸಕರು, ಎಂಎಲ್‌ಸಿಗಳು, ಕಾರ್ಪೊರೇಟರ್‌ಗಳು ಮತ್ತು ನಿಗಮ ಮಂಡಳಿ ಅಧ್ಯಕ್ಷರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರೆಲ್ಲರೂ ಮೂರ್ಖರಲ್ಲ, ಬಿಜೆಪಿಯಲ್ಲೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗುತ್ತಿದೆ, ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೂ ಗೊತ್ತಿದೆ. ಈ ಬಾರಿ ಚುನಾವಣೆಯಲ್ಲಿ ಅವರ ದ್ವೇಷದ ರಾಜಕಾರಣ ಮತ್ತು ಹಿಂದುತ್ವ ಕೆಲಸ ಮಾಡುವುದಿಲ್ಲ, ಇಡಿ, ಐಟಿ ಮತ್ತು ಸಿಬಿಐನಂತಹ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುವುದು ಅವರಿಗೆ ಉಳಿದಿರುವ ಏಕೈಕ ಆಯ್ಕೆಯಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com