ಬಿಜೆಪಿ ಸೋಲಿಸುವುದೊಂದೇ ನಮ್ಮ ಗುರಿ: ಒಗ್ಗಟ್ಟಿನ ಮಂತ್ರ ಪಠಿಸಿದ ಡಿಕೆ ಶಿವಕುಮಾರ್- ಸಿದ್ದರಾಮಯ್ಯ!

ಮುಖ್ಯಮಂತ್ರಿ ಹುದ್ದೆ ಮತ್ತು ಟಿಕೆಟ್‌ ಕುರಿತು ಆಂತರಿಕ ಕಚ್ಚಾಟಗಳ ನಡುವೆಯೂ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಒಗ್ಗಟ್ಟಿನ ಮಂತ್ರ ಪಠಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮುಖ್ಯಮಂತ್ರಿ ಹುದ್ದೆ ಮತ್ತು ಟಿಕೆಟ್‌ ಕುರಿತು ಆಂತರಿಕ ಕಚ್ಚಾಟಗಳ ನಡುವೆಯೂ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಒಗ್ಗಟ್ಟಿನ ಮಂತ್ರ ಪಠಿಸಿದರು.

ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹಾಗೂ ಡಿಕೆ. ಶಿವಕುಮಾರ್ ನಡುವೆ ವೈಮನಸ್ಸು ಇದೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ನಾವಿಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರೂ, ಇಬ್ಬರ ಉದ್ದೇಶ ಒಂದೇ ಆಗಿದೆ, ಬಿಜೆಪಿಯನ್ನು ಸೋಲಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶವಾಗಿದೆ ಎಂದು ಪ್ರತಿಪಾದಿಸಿದರು.

ಸುದ್ದಿ ಮಾಧ್ಯಮವೊಂದಕ್ಕೆ ನಾನು ಸಂದರ್ನ ನೀಡಿದ್ದೆ. ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದೆ. ಅದೇ ರೀತಿ ಡಿ.ಕೆ. ಶಿವಕುಮಾರ್ ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆಂದು ಹೇಳಿದ್ದೆ. ಬಿಜೆಪಿಯನ್ನು ಸೋಲಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವುದು ನಮ್ಮಿಬ್ಬರ ಗುರಿಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದು ವಾಸ್ತವದ ವಿಚಾರ. ಬಿಜೆಪಿಯನ್ನು ಸೋಲಿಸುವುದು ಖಚಿತ.

ಸಂದರ್ಶನದಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಆಕಾಂಕ್ಷಿಯಾಗುವುದರಲ್ಲಿ ತಪ್ಪೇನಿಲ್ಲ, ಉನ್ನತ ಹುದ್ದೆಯ ಆಕಾಂಕ್ಷೆಯನ್ನು ಎಲ್ಲರೂ ಹೊಂದಿರುತ್ತಾರೆ. ಎಂ.ಬಿ.ಪಾಟೀಲ್, ನಮ್ಮ ಪರಮೇಶ್ವರ್ ಅವರೂ ಕೂಡ ಆಕಾಂಕ್ಷಿಯಾಗಿದ್ದಾರೆ. ಅದೇ ರೀತಿ ನಾನು ಹಾಗೂ ಡಿ.ಕೆ.ಶಿವಕುಮಾರ್ ಕೂಡ ಆಕಾಂಕ್ಷಿಯಾಗಿದ್ದೇವ.... ಆದರೆ, ಅಂತಿಮವಾಗಿ ಜನರು ಈ ಬಗ್ಗೆ ನಿರ್ಧರಿಸುತ್ತಾರೆಂದು ಹೇಳಿದರು. ನಂತರ ಶಾಸಕರು ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅದನ್ನೇ ನಾನೂ ಹೇಳಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದರು.

ಶಿವಕುಮಾರ್, ಎಂ.ಬಿ.ಪಾಟೀಲ್ ಅಥವಾ ಇತರ ಯಾವುದೇ ನಾಯಕರೊಂದಿಗೆ ಹೈಕಮಾಂಡ್ ಸಂತೋಷವಾಗಿಲ್ಲ ಎಂದು ನಾನು ಹೇಳಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆಯಿದೆ, ಏಕೆಂದರೆ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ ಎಂದು ನಾನು ಹೇಳಿದ್ದೇನೆ. ಮಾಧ್ಯಮಗಳಲ್ಲಿ ವರದಿಯಾಗಿರುವುದು ಸಂಪೂರ್ಣ ಸುಳ್ಳು ಎಂದು ತಿಳಿಸಿದರು.

ಸಿದ್ದರಾಮಯ್ಯ ಬಳಿಕ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ವಿರುದ್ಧ ನನಗೆ ಯಾವುದೇ ಅಸಮಾಧಾನವಿಲ್ಲ. “ಸಿದ್ದರಾಮಯ್ಯನವರ ಹೃದಯ ಏನೆಂಬುದು ನನಗೆ ಗೊತ್ತು. ನನ್ನ ಹೃದಯ ಏನೆಂದು ನನಗೆ ತಿಳಿದಿದೆ. ನಿನ್ನ ಹೃದಯ ಏನೆಂದು ನನಗೆ ಗೊತ್ತು. ನಾವೆಲ್ಲರೂ ಒಂದೇ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ನಿನ್ನೆಯಷ್ಟೇ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನಿರ್ಧರಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರ ಸಭೆ ಕರೆಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com